ನ್ಯೂಸ್

ಅಯೋಧ್ಯೆ ರಾಮಮಂದಿರ ಉದ್ಘಾಟನೆ: ಧರ್ಮಪಥ, ರಾಮಪಥದಲ್ಲಿ ಸಂಚರಿಸಲಿವೆ ಹೆಚ್ಚುವರಿ ಎಲೆಕ್ಟ್ರಿಕ್ ಬಸ್!

ಅಯೋಧ್ಯೆ: ಅಯೋಧ್ಯೆ ರಾಮಮಂದಿರ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ದಿನಗಣನೆ ಆರಂಭಗೊಂಡಿದ್ದು, ಇದೀಗ ದೇಶವ್ಯಾಪಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಈಗಾಗಲೇ ಸಮಾರಂಭಕ್ಕೆ ಅಗತ್ಯವಿರುವ ಎಲ್ಲಾ ತಯಾರಿಗಳನ್ನು ಉತ್ತರಪ್ರದೇಶ ಸರ್ಕಾರ ಮಾಡಿಕೊಂಡಿದ್ದು, ಸಮಾರಂಭಕ್ಕೆ ಆಗಮನಿಸುವ ಅಪಾರ ಸಂಖ್ಯೆಯ ಭಕ್ತಾಧಿಗಳಿಗೆ ಹೆಚ್ಚುವರಿ ಎಲೆಕ್ಟ್ರಿಕ್ ಬಸ್​ಗಳ ಸೇವೆ ಒದಗಿಸಲು ನಿರ್ಧರಿಸಲಿದೆ.

ಅಯೋಧ್ಯೆ ರಾಮಮಂದಿರದ ಮಹಾಭಿಷೇಕ ಸಮಾರಂಭಕ್ಕೆ ಮುಂಚಿತವಾಗಿ, ಉತ್ತರಪ್ರದೇಶ ಸರ್ಕಾರವು ದೇವಾಲಯದ ಪಟ್ಟಣವಾದ ಅಯೋಧ್ಯೆಯ ಧರ್ಮ ಪಥ ಮತ್ತು ರಾಮಪಥದಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ.

"ರಾಮ ಜನ್ಮಭೂಮಿ ಮತ್ತು ಅಯೋಧ್ಯೆಯ ದೇವಾಲಯಗಳಂತಹ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಸರ್ಕಾರವು ಧರ್ಮ ಪಥ ಮತ್ತು ರಾಮಪಥದಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸುತ್ತಿದೆ" ಎಂದು ಯುಪಿ ಸರ್ಕಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಮಹಾಮಸ್ತಕಾಭಿಷೇಕದ ನಂತರ, ರಾಮಮಂದಿರಕ್ಕೆ ಭೇಟಿ ನೀಡಲು ಬರುವ ಸಂದರ್ಶಕರ ಸಮರ್ಥ ನಿರ್ವಹಣೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಪ್ರಾರಂಭಿಸಲು ಸರ್ಕಾರ ಯೋಜಿಸಿದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಯೋಜಿಸಿದೆ.

ಹೆಚ್ಚುವರಿಯಾಗಿ ಜನವರಿ 15ರಿಂದ 100 ಎಲೆಕ್ಟ್ರಿಕ್ ಬಸ್‌ಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಲಿವೆ ಎಂದ ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತೀಶ್ ಕುಮಾರ್, ಶಂಕುಸ್ಥಾಪನೆ ಸಮಾರಂಭದ ಬಳಿಕ ಸಂದರ್ಶಕರ ಸಂಖ್ಯೆಯಲ್ಲಿ ನಿರೀಕ್ಷಿತ ಹೆಚ್ಚಳವಿರಲಿದೆ ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).