ಭೋಪಾಲ್: ಶಾಸಕರ ರಾಜೀನಾಮೆಯಿಂದಾಗಿ ಸಂಕಷ್ಟದಲ್ಲಿರುವ ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯಪಾಲ ಲಾಲ್ಜಿ ಟಂಡನ್ ಅವರು ಮತ್ತೊಂದು ಶಾಕ್ ನೀಡಿದ್ದು, ನಾಳೆಯೇ ಬಹುಮತ ಸಾಬೀತಿಗೆ ಗಡುವು ನೀಡಿರುವುದರಿಂದ ಸಿಎಂ ಕಮಲ್ನಾಥ್ ಸರ್ಕಾರ ಪತನಕ್ಕೆ ಕೌಂಟ್ಡೌನ್ ಶುರುವಾಗಿದೆ.
ಸಿಎಂ ಕಮಲ್ನಾಥ್ ಇಂದು ಸಚಿವ ಸಂಪುಟ ಸಭೆ ಕರೆದಿರುವುದರಿಂದ ಕುದುರೆ ವ್ಯಾಪಾರ ಭೀತಿಯಿಂದ ಜೈಪುರದ ರೆಸಾರ್ಟ್ನಲ್ಲಿದ್ದ ತಮ್ಮ ಶಾಸಕರನ್ನು ಮರಳಿಗೆ ರಾಜ್ಯಕ್ಕೆ ಕರೆತರುತ್ತಿದ್ದಾರೆ.
ಶನಿವಾರವಷ್ಟೇ ಲಾಲ್ಜಿ ಟಂಡನ್ ಅವರು ಸೋಮವಾರ ವಿಶ್ವಾಸಮತ ಯಾಚನೆ ನಡೆಸುವಂತೆ ಸ್ಪೀಕರ್ ನರ್ಮದಾ ಪ್ರಸಾದ್ ಅವರಿಗೆ ಸೂಚನೆ ನೀಡಿದ್ದರು. ಆರು ಬಂಡಾಯ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ ಬೆನ್ನಲ್ಲೇ ರಾಜ್ಯಪಾಲರು ಬಹುಮತ ಸಾಬೀತಿಗೆ ಸೂಚಿಸಿದ್ದಾರೆ.
ಆರು ಶಾಸಕರ ರಾಜೀನಾಮೆಯಿಂದಾಗಿ ಮಧ್ಯಪ್ರದೇಶ ವಿಧಾನಸಭಾ ಬಲ 113ಕ್ಕೆ ಕುಸಿದಿದೆ. ಬಹುಮತ ತಲುಪಲು ಕಾಂಗ್ರೆಸ್ಗೆ ಇನ್ನೂ ಇಬ್ಬರು ಶಾಸಕರ ಬೆಂಬಲ ಬೇಕಾಗಿದೆ. ಹೀಗಾಗಿ ನಾಳಿನ ವಿಶ್ವಾಸಮತ ಯಾಚನೆಯಲ್ಲಿ ಕಮಲ್ನಾಥ್ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ.
ಕಳೆದ ವಾರ 22 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದಾರೆ. ಇದರಲ್ಲಿ 6 ಶಾಸಕರನ್ನು ಸಿಎಂ ಕಮಲ್ನಾಥ್ ಮನವಿಯಂತೆ ರಾಜ್ಯಪಾಲರು ವಜಾಗೊಳಿಸಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಜೋತಿರಾದಿತ್ಯ ಸಿಂಧಿಯಾ ಬಣದ ಕಾಂಗ್ರೆಸ್ ಶಾಸಕರ ನಡೆಯಿಂದಾಗಿ ಕಮಲ್ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ. ರಾಜೀನಾಮೆ ನೀಡಿರುವ ಶಾಸಕರನ್ನು ಬೆಂಗಳೂರಿನಲ್ಲಿ ಬಲವಂತವಾಗಿ ಬಂಧಿಸಿಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸದ್ಯ ಕಾಂಗ್ರೆಸ್ ತನ್ನ 108 ಶಾಸಕರೊಂದಿಗೆ ಇತರೆ 7 ಶಾಸಕರ ಬೆಂಬಲವನ್ನು ಹೊಂದಿದೆ. ಒಂದು ವೇಳೆ ಎಲ್ಲ ಶಾಸಕರ ರಾಜೀನಾಮೆ ಅಂಗೀಕಾರವಾದರೆ, ವಿಧಾನಸಭಾ ಬಹುಮತ ಸಂಖ್ಯೆ 104ರ ಸಂಖ್ಯೆಗಿಂತಲೂ ಕಾಂಗ್ರೆಸ್ ಬಲ ಕುಸಿಯಲಿದೆ. ಬಿಜೆಪಿ 107 ಶಾಸಕರನ್ನು ಹೊಂದಿದ್ದು, ಸರ್ಕಾರವನ್ನು ರಚಿಸಬಹುದಾಗಿದೆ. (ಏಜೆನ್ಸೀಸ್)