ನ್ಯೂಸ್

ಡಾ.ಮನಮೋಹನ್ ಸಿಂಗ್ ಅಗಲಿಕೆಗೆ ಕೃಷಿ ಸಚಿವರ ಸಂತಾಪ

ಬೆಂಗಳೂರು: ದೇಶ ಕಂಡ ಅತ್ಯುತ್ತಮ ಪ್ರಧಾನ ಮಂತ್ರಿಗಳಲ್ಲಿ ಒಬ್ಬರಾದ ಆರ್ಥಿಕ ತಜ್ಞ, ಸುಧಾರಕ ಡಾ. ಮನಮೋಹನ್ ಸಿಂಗ್ ಅವರ ಅಗಲಿಕೆ ಆಘಾತ ಉಂಟು ಮಾಡಿದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.

ಹಣಕಾಸು ಸಚಿವರಾಗಿ ಹಾಗೂ ಹಾಗೂ 10 ವರ್ಷಗಳ ಕಾಲ ಪ್ರಧಾನಿಯಾಗಿ ಅವರು ಜಾರಿಗೆ ತಂದ ಉದಾರಿಕರಣ ಸೇರಿದಂತೆ ಹಲವು ಆರ್ಥಿಕ ಸುಧಾರಣಾ ಕ್ರಮಗಳು ಇಂದಿಗೂ ದೇಶದ ಹಣಕಾಸಿನ ಸದೃಡತೆಗೆ ನೆರವಾಗಿವೆ.ಜೊತೆಗೆ ಜಾಗತಿಕ ಮನ್ನಣೆಗೆ ಪಾತ್ರವಾಗಿವೆ. ಭಾರತದ ಆರ್ಥಿಕ ಇತಿಹಾಸದಲ್ಲಿ ಡಾ ಮನಮೋಹನ್ ಸಿಂಗ್ ಅವರ ಹೆಸರು ಎಂದೆಂದಿಗೂ ಚಿರಸ್ಥಾಯಿಯಾಗಿ ಉಳಿಯಲಿzದೆ. ವಿದೇಶಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಅಲ್ಲಿನ ಬ್ಯಾಂಕ್‍ಗಳು ಮುಚ್ಚುತ್ತಿದ್ದಾಗ ನಮ್ಮ ದೇಶದ ಬ್ಯಾಂಕುಗಳು ಸಶಕ್ತವಾಗುತ್ತಾ ಸಾಗಿ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು ಸ್ಮರಣೀಯ ಎಂದಿದ್ದಾರೆ.

ಅತ್ಯಂತ ಮಿತ ಭಾಷಿಯಾದರೂ ಕ್ಷಿಷ್ಟ ಸಂದರ್ಭದಲ್ಲಿ ವಿಚಲಿತರಾಗದೆ ಸ್ಪಷ್ಟ, ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಸಾಮಥ್ರ್ಯ ಹೊಂದಿದ್ದ ಮನಮೋಹನ್ ಸಿಂಗ್ ಅವರು ದಕ್ಷ ಆಡಳಿತಗಾರರೂ ಆಗಿದ್ದರು. ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ. ಎರೆಡು ಬಾರಿ ಪ್ರಧಾನ ಮಂತ್ರಿಯಾಗಿದ್ದಾಗಲೂ ಅವರು ಅನುಸರಿಸಿದ ವಿದೇಶಾಂಗ ನೀತಿ, ದಿಟ್ಟ ನಿರ್ಧಾರಗಳು ಜಾಗತಿಕ ಮಟ್ಟದಲ್ಲಿ ಭಾರತದ ಇಮೇಜು ಬದಲಿಸಲು ಹಾದಿ ಮಾಡಿಕೊಟ್ಟಿದೆ. ಭಾರತ ಇಂದು ಒಂದು ಬಲಿಷ್ಟ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪಾತ್ರ ಅಪಾರ ಎಂದು ಹೇಳಿದ್ದಾರೆ.