ನ್ಯೂಸ್

ಕೃಷಿ ಅಧಿಕಾರಿಗಳ ಬಂಧನ: ವರ್ಗಾವಣೆ ದಂಧೆ ಸಾಬೀತಾಗಿದೆ: ಕುಮಾರಸ್ವಾಮಿ

ಬೆಂಗಳೂರು: ಕೃಷಿ ಸಚಿವ ಚಲುವಾರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರಿನ ಪತ್ರ ಬರೆದ ಕೃಷಿ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಸಿಐಡಿ ವಶಕ್ಕೆ ಪಡೆಯುವ ಮೂಲಕ, ಈ ಸರ್ಕಾರದಲ್ಲಿ ವರ್ಗಾವಣೆ ದಂಧೆ ಹಾಗೂ ಮಂತ್ರಿಗಳಿಂದ ಅಧಿಕಾರಿಗಳ ಸುಲಿಗೆ ನಡೆಯುತ್ತಿದೆ ಎಂದಬುದು ಸಾಬೀತಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದ ಜರಗನಹಳ್ಳಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಆ ಪತ್ರವು ನಕಲಿಯೋ ಅಸಲಿಯೋ ಆ ಮಾತು ಹಾಗಿರಲಿ. ಆದರೆ, ಕೃಷಿ ಇಲಾಖೆಯಲ್ಲಿ ಸುಲಿಗೆ, ವರ್ಗಾವಣೆ ದಂಧೆ ನಡೆಯುತ್ತಿರುವುದು ಅಸಲಿ ಎನ್ನುವುದು ಗೊತ್ತಾಯಿತು ಎಂದರು.

ಆ ಅಧಿಕಾರಿಗಳು ದೂರಿನ ಪತ್ರ ಯಾಕೆ ಬರೆದರು? ಅವರು ಮೈಸೂರಿನವರಾದರೂ ಆಗಲಿ ಅಥವಾ ಮಂಡ್ಯದವರಾದರೂ ಆಗಲಿ. ಸತ್ಯ ಏನೆಂಬುದು ಬಯಲಿಗೆ ಬಂತಲ್ಲ. ಇಬ್ಬರು ಅಧಿಕಾರಿಗಳನ್ನು ಏಕೆ ವಶಕ್ಕೆ ಪಡೆದಿದ್ದಾರೆ? ಅಧಿಕಾರಿಗಳ ಬಂಧನವಾಗಿದೆ ಅಂದರೆ ಭ್ರಷ್ಟಾಚಾರ, ವರ್ಗಾವಣೆ ದಂಧೆ ಆಗಿದೆ ಅಂತಲೇ ಅಲ್ಲವೇ? ಆರೋಪಿ ಸ್ಥಾನದಲ್ಲಿರುವ ಸಚಿವರೇ ಪ್ರತಿಯೊಂದಕ್ಕೂ ಉತ್ತರ, ಹೇಳಿಕೆ ಕೊಡುತ್ತಿದ್ದಾರೆ. ಸಿಐಡಿ ಪೊಲೀಸರು ತನಿಖೆಯ ವರದಿಯನ್ನು ಗೃಹ ಸಚಿವರಿಗೆ ಕೊಡುತ್ತಾರೋ ಅಥವಾ ಮುಖ್ಯಮಂತ್ರಿಗಳಿಗೆ ಕೊಡುತ್ತಾರೋ? ಇಲ್ಲವೇ ಆರೋಪಿ ಸ್ಥಾನದಲ್ಲಿರುವ ಸಚಿವರಿಗೆ ಎಲ್ಲ ಮಾಹಿತಿಯನ್ನು ಸೋರಿಕೆ ಮಾಡಿತ್ತಾರೋ? ಇದೇನು ತನಿಖೆಯಾ? ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.