ರಿಪ್ಪನ್‌ಪೇಟೆ: ಪ್ರಸಕ್ತ ಸಾಲಿನಲ್ಲಿ ಷೇರುದಾರರಿಗೆ ಒಂದು ಕೋಟಿ ರೂ. ಹೊಸ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಂ.ಪರಮೇಶ್ ಹೇಳಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಪಿಎಸಿಎಸ್ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಸಂಘವು 2.07 ಕೋಟಿ ರೂ. ಷೇರು ಬಂಡವಾಳ ಹೊಂದಿದ್ದು, ಪ್ರಸಕ್ತ ವರ್ಷ ಬೆಳೆ ಸಾಲ 10.40 ಕೋಟಿ ರೂ. ನೀಡಲಾಗಿದೆ. 3.50 ಕೋಟಿ ರೂ. ನಗದು ಸಾಲ, 60 ಲಕ್ಷ ರೂ. ಮಧ್ಯಮಾವಧಿ ಸಾಲ ನೀಡಿದ್ದು, 10.40 ಲಕ್ಷ ರೂ. ಲಾಭದಲ್ಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸದಸ್ಯರು ಚರ್ಚಿಸಿ ಷೇರುದಾರರಿಗೆ ಡಿವಿಡೆಂಡ್ ನೀಡುವ ಬದಲಿಗೆ ಕೃಷಿ ಉಪಕರಣ ನೀಡಲು ತೀರ್ಮಾನಿಸಿದರು. ಸಂಘವನ್ನು ಲಾಭದಲ್ಲಿ ಮುನ್ನಡೆಸುತ್ತಿರುವ ಪರಮೇಶ್ ಅವರಿಗೆ ಸರ್ಕಾರ ಸಹಕಾರಿ ರತ್ನ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿ ನಿರ್ಣಯ ಅಂಗೀಕರಿಸಲಾಯಿತು. ಉಪಾಧ್ಯಕ್ಷ ಎನ್.ಪಿ.ರಾಜು, ನಿರ್ದೇಶಕರಾದ ಜಿ.ಎನ್.ಸೋಮಶೇಖರ, ಕೆ.ಬಿ.ಭದ್ರಪ್ಪ, ಬಿ.ಟಿ.ವಿಶ್ವನಾಥ, ಭೈರಪ್ಪ, ಬೋರಪ್ಪ, ಸಿಇಒ ಸರಸ್ವತಿ ಇತರರಿದ್ದರು.