ನವದೆಹಲಿ: ಅಮೆರಿಕದಿಂದ ಭಾರತಕ್ಕೆ ಮೆಕ್ಕೆಜೋಳ, ಸೋಯಾಬೀನ್ ಮುಂತಾದ ಕೃಷಿ ಉತ್ಪನ್ನಗಳ ಆಮದು ಮಾಡಿಕೊಳ್ಳುವುದರ ಮೇಲೆ ಕಡಿಮೆ ಸುಂಕ ವಿಧಿಸಬೇಕೆಂದು ಅಮೆರಿಕದ ಅಧಿಕಾರಿಗಳು ಷರತ್ತು ವಿಧಿಸುತ್ತಿರುವುದು ಉಭಯ ದೇಶಗಳ ಮಧ್ಯೆ ನಡೆಯುತ್ತಿರುವ ವ್ಯಾಪಾರ ಒಪ್ಪಂದ ಮಾತುಕತೆಗೆ ಅಡ್ಡಿಯಾಗಿ ಪರಿಣಮಿಸಿದೆ. ಇಂತಹ ಒತ್ತಾಯಕ್ಕೆ ಮಣಿದರೆ ಭಾರತದ ರೈತರ ಮೇಲೆ ಪ್ರತಿಕೂಲ ಪರಿಣಾಮ ಆಗುವುದು ಖಚಿತ. ಅದಲ್ಲದೆ ಕುಲಾಂತರಿ ಬೆಳೆಗಳು ಮತ್ತು ಆಹಾರದಿಂದ ಆಗುವ ಪರಿಣಾಮಗಳ ಬಗ್ಗೆ ಈಗಲೂ ಆತಂಕವಿದೆ. ಈ ವಿಷಯಗಳಿಂದಾಗಿಯೇ ಮಾತುಕತೆ ಮುಂದುವರಿಯಲು ಸಮಸ್ಯೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಜುಲೈ 9ರ ಗಡುವಿಗಿಂತ ಮೊದಲು ಒಪ್ಪಂದ ಏರ್ಪಡದಿದ್ದರೆ, ಭಾರತದ ಕೈಗಾರಿಕೆಗಳು ಶೇ. 26ರಷ್ಟು ತೆರಿಗೆಯನ್ನು ಅಮೆರಿಕಕ್ಕೆ ತೆರಲು ಸಿದ್ಧವಾಗಬೇಕಾಗುತ್ತದೆ. ಜವಳಿ, ಚರ್ಮದ ವಸ್ತುಗಳು, ಔಷಧಿ, ಕೆಲವು ಎಂಜಿನಿಯರಿಂಗ್ ವಸ್ತುಗಳು, ಆಟೋಮೊಬೈಲ್ ಭಾಗಗಳು ಸೇರಿದಂತೆ ಭಾರತದ ಹಿತಾಸಕಿಯನ್ನು ಒಳಗೊಂಡಿರುವ ಹಲವು ಉತ್ಪನ್ನಗಳಿಗೆ ಶೂನ್ಯ ಸುಂಕದ ಲಾಭ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಈ ಮಾತುಕತೆಗಳ ಆರಂಭಿಕ ಹಂತದಲ್ಲಿ ಭಾವಿಸಿತ್ತು. ಆದರೆ ಅಮೆರಿಕದ ಅಧಿಕಾರಿಗಳು ಯಾವುದೇ ಉತ್ಪನ್ನವಿರಲಿ, ತಕ್ಷಣವೇ ಶೂನ್ಯ ಸುಂಕಕ್ಕೆ ಇಳಿಯಲು ಸಾಧ್ಯವಿಲ್ಲ. ಮೂಲಸುಂಕವಾದ ಶೇ. 10ರಷ್ಟಾದರೂ ಮುಂದುವರಿಯುತ್ತದೆ ಎಂಬುದಾಗಿ ಭಾರತದ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದಾರೆ.
ಮುಂದಿನ ಹಂತದ ಮಾತುಕತೆಗಳಿಗಾಗಿ ಭಾರತದ ಅಧಿಕಾರಿಗಳ ತಂಡವು ಸದ್ಯದಲ್ಲೇ ಅಮೆರಿಕಕ್ಕೆ ಭೇಟಿ ನೀಡಲಿದೆ. ಮಧ್ಯಂತರ ಅಥವಾ ಮೊದಲ ಹಂತದ ದ್ವಿಪಕ್ಷೀಯ ಒಪ್ಪಂದ ಈ ವೇಳೆ ಅಂತಿಮಗೊಳ್ಳಲಿದೆ. ಜೂ. 5ರಿಂದ ಜೂ. 11ರವರೆಗಿನ ಮಾತುಕತೆ ಭಾರತದಲ್ಲಿ ನಡೆದಿದ್ದು, ಅದಕ್ಕಾಗಿ ಅಮೆರಿಕದ ಅಧಿಕಾರಿಗಳು ಇಲ್ಲಿಗೆ ಆಗಮಿಸಿದ್ದರು.
ಇತ್ತೀಚೆಗೆ ಭಾರತ-ಪಾಕಿಸ್ತಾನ ಯುದ್ಧವನ್ನು ತಾನು ತಪ್ಪಿಸಿದ್ದಾಗಿ ಟ್ರಂಪ್ ಸಾಕಷ್ಟು ಸಲ ಹೇಳಿದ್ದಾರೆ. ಅದಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ‘ಈ ವಿಷಯದಲ್ಲಿ ಟ್ರಂಪ್ ಪಾತ್ರ ಏನೂ ಇರಲಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆಗಳು ವ್ಯಾಪಾರ ಒಪ್ಪಂದದ ಸುಗಮ ಮುಂದುವರಿಕೆಯ ಮೇಲೆ ಪರಿಣಾಮ ಬೀರಿವೆಯೇ ಎಂಬ ಶಂಕೆಯನ್ನು ಮೂಲಗಳು ತಳ್ಳಿಹಾಕಿವೆ. ‘ವ್ಯಾಪಾರ ಒಪ್ಪಂದ ಮಾತುಕತೆಗೂ, ಈ ಹೇಳಿಕೆಗಳಿಗೂ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿವೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏ. 2ರಂದು ಭಾರತದ ಮೇಲೆ ಶೇ. 26ರಷ್ಟು ಹೆಚ್ಚುವರಿ ಪರಸ್ಪರ ತೆರಿಗೆಗಳನ್ನು ವಿಧಿಸಿ ನಂತರ ಜು. 9ರವರೆಗೆ ಅದಕ್ಕೆ ತಡೆ ನೀಡಿದ್ದರು. ಆದರೆ ಶೇ. 10ರಷ್ಟು ಮೂಲ ತೆರಿಗೆ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದ್ದರು. ಈಗ ಆ ಶೇ. 26ರ ತೆರಿಗೆಗಳನ್ನು ಹಿಂತೆಗೆಸಲು ಭಾರತದ ಅಧಿಕಾರಿಗಳು ಈ ಮಾತುಕತೆಯಲ್ಲಿ ಪ್ರಯತ್ನಿಸುತ್ತಿದ್ದಾರೆ.
ಎರಡೂ ದೇಶಗಳ ಮಧ್ಯೆ, ಜು. 9 ರೊಳಗೆ ಯಾವುದೇ ಒಪ್ಪಂದ ಏರ್ಪಡದೇ ಇದ್ದರೆ ಏ. 2ರ ಮೂಲಸ್ಥಿತಿ ವಾಪಸಾಗುತ್ತದೆ. ಟ್ರಂಪ್ ಘೊಷಿಸಿದ್ದಂತೆ ಶೇ. 26ರಷ್ಟು ತೆರಿಗೆಯನ್ನು ತೆರಲು ಭಾರತದ ರಫ್ತು ಉದ್ಯಮಿಗಳು ಸಿದ್ಧರಾಗ ಬೇಕಾಗುತ್ತದೆ. ಆದರೆ ಆ ಸ್ಥಿತಿ ಬರುವ ಸಾಧ್ಯತೆ ತೀರಾ ಕಡಿಮೆ. ಅಷ್ಟರೊಳಗೆ ಮಧ್ಯಂತರ ಅಥವಾ ಪ್ರಾಥಮಿಕ ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆಯೇ ಅಧಿಕ ಎನ್ನುತ್ತವೆ ಮೂಲಗಳು.