ನವದೆಹಲಿ: ಭಾರತದ ಜತೆ ಮಾಡಿಕೊಳ್ಳಲಿರುವ ವ್ಯಾಪಾರ ಒಪ್ಪಂದವು ಇಂಡೋನೇಷ್ಯಾದೊಂದಿಗೆ ಮಂಗಳವಾರ ಮಾಡಿಕೊಂಡ ಒಪ್ಪಂದದಂತೆ ಇರುತ್ತದೆ ಎಂದು ಹೇಳುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಚ್ಚರಿ ಮೂಡಿಸಿದ್ದಾರೆ.
‘ಭಾರತ ಮೂಲತಃ ಇದೇ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ. ನಾವು ಭಾರತಕ್ಕೆ ಪ್ರವೇಶ ಪಡೆಯಲಿದ್ದೇವೆ. ಈ ಯಾವುದೇ ದೇಶಗಳಿಗೆ ನಮಗೆ ಪ್ರವೇಶವಿರಲಿಲ್ಲ. ನಮ್ಮ ಜನ ಆ ರಾಷ್ಟ್ರಗಳ ಒಳಗೆ ಹೋಗಲು ಸಾಧ್ಯವಿರಲಿಲ್ಲ, ಈಗ ನಾವು ಸುಂಕ ವಿಧಿಸುವ ಕೆಲಸದಿಂದಾಗಿ ಅಲ್ಲಿಗೆ ಪ್ರವೇಶ ಪಡೆಯುತ್ತಿದ್ದೇವೆ’ ಎಂದು ಟ್ರಂಪ್ ಸುದ್ದಿಗಾರರಿಗೆ ಹೇಳಿದರು.
ಭಾರತದ ತಂಡ: ಭಾರತದ ಅಧಿಕಾರಿಗಳ ತಂಡ ಉದ್ದೇಶಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಐದನೇ ಸುತ್ತಿನ ಮಾತುಕತೆಗಾಗಿ ವಾಷಿಂಗ್ಟನ್ನಲ್ಲಿದೆ. ಕೃಷಿ ಮತ್ತು ಆಟೋಮೊಬೈಲ್ನಂತಹ ಕೆಲವು ಕ್ಷೇತ್ರಗಳಲ್ಲಿ ಸಹಮತ ಮೂಡದೆ ಸಮಸ್ಯೆಯಾಗಿದೆ. ಕೃಷಿ ಮತ್ತು ಡೇರಿ ಉತ್ಪನ್ನಗಳ ವಲಯಕ್ಕೆ ಮುಕ್ತ ಪ್ರವೇಶ ನೀಡಲು ಭಾರತ ಸಿದ್ಧವಿಲ್ಲ. ಹಲವು ದಶಕಗಳಿಂದ ಎಲ್ಲ ವ್ಯಾಪಾರ ಮಾತುಕತೆಗಳಲ್ಲೂ ಭಾರತ ಇದೇ ನಿಲುವು ಅನುಸರಿಸಿಕೊಂಡು ಬಂದಿದೆ. ಟ್ರಂಪ್ ಏಪ್ರಿಲ್ 2ರಂದು ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಭಾರಿ ಸುಂಕಗಳನ್ನು ಘೊಷಿಸಿದ್ದರು. ತೀವ್ರ ವಿರೋಧ ಎದುರಾದ ಹಿನ್ನೆಲೆಯಲ್ಲಿ ಮಾತುಕತೆಗೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಆ ಸುಂಕಗಳನ್ನು ಮೊದಲು 90 ದಿನಗಳವರೆಗೆ (ಜುಲೈ 9) ಮತ್ತು ನಂತರ ಆಗಸ್ಟ್ 1ರವರೆಗೆ ಮುಂದೂಡಿದ್ದರು.
ಅಮೆರಿಕದ ಉತ್ಪನ್ನಗಳಿಗೆ ತನ್ನ ಮಾರುಕಟ್ಟೆ ಪ್ರವೇಶಿಸಲು ಇಂಡೋನೇಷ್ಯಾ ಸಂಪೂರ್ಣ ಒಪ್ಪಿಗೆ ನೀಡಿದೆ. ಇದಕ್ಕೆ ಪ್ರತಿಯಾಗಿ ಇಂಡೋನೇಷ್ಯಾದ ಉತ್ಪನ್ನಗಳಿಗೆ ಅಮೆರಿಕದಲ್ಲಿ ಶೇ. 19ರಷ್ಟು ಸುಂಕ ವಿಧಿಸಲಾಗುತ್ತದೆ. ಇದಲ್ಲದೆ ಅಮೆರಿಕದಿಂದ ಇಂಡೋನೇಷ್ಯಾ 15 ಶತಕೋಟಿ ಡಾಲರ್ ಮೌಲ್ಯದ ಇಂಧನ, 4.5 ಶತಕೋಟಿ ಡಾಲರ್ ಮೌಲ್ಯದ ಕೃಷಿ ಉತ್ಪನ್ನಗಳು ಮತ್ತು 50 ಬೋಯಿಂಗ್ ಜೆಟ್ಗಳನ್ನು ಖರೀದಿಸಲು ಒಪ್ಪಿಕೊಂಡಿದೆ. ಇದು ಅವೆರಡೂ ರಾಷ್ಟ್ರಗಳ ಮಧ್ಯೆ ಆಗಿರುವ ಒಪ್ಪಂದ.
ಕೈಗಾರಿಕಾ ಉತ್ಪನ್ನ, ಆಟೋ ಮೊಬೈಲ್, ಎಲೆಕ್ಟ್ರಿಕ್ ವಾಹನ, ವೈನ್, ಪೆಟ್ರೋಕೆಮಿಕಲ್ ಉತ್ಪನ್ನ ಮತ್ತು ಕೃಷಿ, ಹೈನುಗಾರಿಕೆ ಉತ್ಪನ್ನಗಳು, ಸೇಬು, ಕುಲಾಂತರಿ ಬೆಳೆಗಳ ಮೇಲೆ ಸುಂಕ ರಿಯಾಯಿತಿ ನೀಡುವಂತೆ ಅಮೆರಿಕ ಒತ್ತಾಯಿಸುತ್ತಿದೆ.
ಟ್ರಂಪ್ ಹೇರಿರುವ ಶೇಕಡ 26 ಹೆಚ್ಚುವರಿ ಸುಂಕ ತೆಗೆದುಹಾಕಬೇಕು, ಉಕ್ಕು ಮತ್ತು ಅಲ್ಯೂಮಿನಿಯಂ (ಶೇ. 50), ಆಟೋ ಮೊಬೈಲ್ (ಶೇ. 25) ಕ್ಷೇತ್ರಗಳ ಮೇಲಿನ ಸುಂಕ ಸಡಿಲಗೊಳಿಸಬೇಕೆಂಬುದು ಭಾರತದ ಕೋರಿಕೆ. ಈ ಸುಂಕಗಳ ವಿರುದ್ಧ, ಭಾರತವು ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲೂ್ಯಟಿಒ) ನಿಯಮಗಳಡಿ ಪ್ರತೀಕಾರ ಸುಂಕ ವಿಧಿಸುವ ಹಕ್ಕನ್ನು ಕಾಯ್ದಿರಿಸಿದೆ. ಹೆಚ್ಚು ಕಾರ್ವಿುಕರು ದುಡಿಯುತ್ತಿರುವ ಜವಳಿ, ರತ್ನಾಭರಣ, ಚಮೋತ್ಪನ್ನ, ಗಾರ್ವೆಂಟ್, ಪ್ಲಾಸ್ಟಿಕ್, ರಾಸಾಯನಿಕ ಕ್ಷೇತ್ರಗಳಲ್ಲದೆ ಸೀಗಡಿ, ಎಣ್ಣೆ ಬೀಜ, ದ್ರಾಕ್ಷಿ, ಬಾಳೆಹಣ್ಣುಗಳಿಗೆ ಭಾರತವು ಸುಂಕ ರಿಯಾಯಿತಿ ಕೋರಿದೆ.
ಇಷ್ಟು ಕೆಟ್ಟ ಒಪ್ಪಂದ ಮಾಡಿಕೊಳ್ಳುವ ಬದಲು ಒಪ್ಪಂದ ಮಾಡಿಕೊಳ್ಳದೇ ಇರುವುದು ಲೇಸು. ಭಾರತ ಪಾರದರ್ಶಕವಾಗಿ ಮಾತುಕತೆ ನಡೆಸಬೇಕು. ಅಮೆರಿಕ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದಕ್ಕೆ ಬಿಡಬಾರದು. ದೀರ್ಘಕಾಲೀನ ಆರ್ಥಿಕ ಹಿತಾಸಕ್ತಿಗಳಲ್ಲಿ ರಾಜಿ ಮಾಡಿಕೊಳ್ಳಬಾರದು. ಒತ್ತಡಕ್ಕೆ ಒಳಗಾಗಿ ತ್ವರಿತ, ಸಾಂಕೇತಿಕ ಒಪ್ಪಂದಕ್ಕೆ ಕೈಹಾಕಬಾರದು. | ಅಜಯ್ ಶ್ರೀವಾಸ್ತವ ಜಿಟಿಆರ್ಐ ಸಂಸ್ಥಾಪಕ