ನ್ಯೂಸ್

ಜಿಎಸ್​​ಟಿ ಬಾಕಿ ಪಾವತಿಗೆ ಸಮ್ಮತಿ: ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ; ಹಲವು ಶಿಫಾರಸು ಅಂಗೀಕಾರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸಂಬಂಧ ರಾಜ್ಯಗಳಿಗೆ 2022ರ ಜೂನ್ 1 ರವರೆಗೆ ಬಾಕಿಯಿರುವ 16,982 ಕೋಟಿ ರೂ. ಪರಿಹಾರ ಹಣವನ್ನು ಪೂರ್ಣವಾಗಿ ಪಾವತಿಸಲಾಗುವುದೆಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ತಿಳಿಸಿದರು. ಇದರೊಂದಿಗೆ ಶಿವರಾತ್ರಿಯಂದು ರಾಜ್ಯಗಳಿಗೆ ಶುಭಸುದ್ದಿ ನೀಡಿದರು.

ಇಷ್ಟೊಂದು ಹಣ ಸದ್ಯಕ್ಕೆ ಪರಿಹಾರ ನಿಧಿಯಲ್ಲಿ ಲಭ್ಯವಿಲ್ಲದಿದ್ದರೂ ನಮ್ಮದೇ ಸಂಪನ್ಮೂಲಗಳಿಂದ ಬಿಡುಗಡೆ ಮಾಡಲು ನಾವು ನಿರ್ಧರಿಸಿದ್ದೇವೆ. ಮುಂದಿನ ಪರಿಹಾರ ಸೆಸ್ ಸಂಗ್ರಹದಿಂದ ಅದನ್ನು ಹೊಂದಿಸಿಕೊಳ್ಳಲಾಗುತ್ತದೆ ಎಂದು ಜಿಎಸ್​ಟಿ ಮಂಡಳಿಯ 49ನೇ ಸಭೆಯ ನಂತರ ಅವರು ವಿವರಿಸಿದರು. ಐದು ವರ್ಷಗಳ ಪರಿಹಾರ ಬಾಕಿಯನ್ನು ಪಾವತಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಜಿಎಸ್​ಟಿ ಅನುಷ್ಠಾನಗೊಳಿಸಿದ 2017 ಜುಲೈ 1ರಿಂದ ನಷ್ಟವಾದ ಹಣವನ್ನು ಭರಿಸಿಕೊಳ್ಳಲು ಸೆಸ್ ಹೇರಿಕೆಗೆ 2017ರ ಜಿಎಸ್​ಟಿ (ರಾಜ್ಯಗಳಿಗೆ ಪರಿಹಾರ) ಕಾನೂನು ಅವಕಾಶ ನೀಡುತ್ತದೆ. ಅದನ್ನು ರಾಜ್ಯಗಳಿಗೆ ಪಾವತಿಸಲಾಗುತ್ತದೆ. ಜಿಎಸ್​ಟಿ ವ್ಯವಸ್ಥೆಯ ಅಳವಡಿಕೆಯಿಂದಾಗಿ ಅನೇಕ ರಾಜ್ಯಗಳಿಗೆ ಆದಾಯ ನಷ್ಟವಾಗಿದೆ. 2017ರ ಜುಲೈನಿಂದ ಲೆಕ್ಕ ಹಾಕಿ ಐದು ವರ್ಷಗಳ ಅವಧಿಗೆ ಪರಿಹಾರ ಒದಗಿಸಬೇಕಿದೆ. ತೆಳು ಬೆಲ್ಲ, ಪೆನ್ಸಿಲ್ ಶಾರ್ಪನರ್ ಮತ್ತು ಕೆಲವು ಟ್ರಾ್ಯಕಿಂಗ್ ಸಾಧನಗಳ ಜಿಎಸ್​ಟಿ ಕಡಿಮೆ ಮಾಡಲೂ ಶನಿವಾರದ ಸಭೆ ನಿರ್ಧರಿಸಿದೆ. ಸಿಮೆಂಟ್ ಮೇಲಿನ ಜಿಎಸ್​ಟಿ ತಗ್ಗಿಸುವ ಪ್ರಸ್ತಾಪನೆ ಇನ್ನೂ ಫಿಟ್ಮೆಂಟ್ ಸಮಿತಿ ಮುಂದೆ ಬಂದಿಲ್ಲ.

ಮೇಲ್ಮನವಿ ಟ್ರಿಬ್ಯುನಲ್ ರಚನೆ ವರದಿಗೆ ಒಪ್ಪಿಗೆ: ಜಿಎಸ್​ಟಿ ಮೇಲ್ಮನವಿ ಟ್ರಿಬ್ಯುನಲ್ ಸ್ಥಾಪನೆಗೆ ಸಂಬಂಧಿಸಿದಂತೆ ಸಚಿವರ ಗುಂಪು ನೀಡಿದ ವರದಿಯನ್ನು ಜಿಎಸ್​ಟಿ ಮಂಡಳಿಯು ಕೆಲ ಮಾರ್ಪಾಡುಗಳೊಂದಿಗೆ ಒಪ್ಪಿಕೊಂಡಿದೆ. ಭಾಷೆಯ ಒಂದು ಬದಲಾವಣೆಯೊಂದಿಗೆ ವರದಿ ಅಂಗೀಕರಿಸಲಾಗಿದೆ. ಕರಡಿನಲ್ಲಿನ ಬದಲಾವಣೆಯನ್ನು ಐದಾರು ದಿನಗಳಲ್ಲಿ ಸದಸ್ಯರಿಗೆ ಅವರ ಅಭಿಪ್ರಾಯಗಳನ್ನು ಕೋರಿ ನೀಡಲಾಗುತ್ತದೆ ಎಂದು ಸಚಿವೆ ತಿಳಿಸಿದ್ದಾರೆ. ಕಳೆದ ಜುಲೈನಲ್ಲಿ ಹರಿಯಾಣಾ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ನೇತೃತ್ವದಲ್ಲಿ ಮೇಲ್ಮನವಿ ಟ್ರಿಬ್ಯುನಲ್ ರಚನೆಗೆ ಸಂಬಂಧಿಸಿ ಸಮಿತಿ ರಚಿಸಲಾಗಿತ್ತು. ವಾರ್ಷಿಕ ಜಿಎಸ್​ಟಿ ರಿಟರ್ನ್ಸ್ ಸಲ್ಲಿಕೆಯ ವಿಳಂಬಕ್ಕೆ ವಿಧಿಸಲಾಗುವ ದಂಡಗಳ ಸುಧಾರಣೆಗೆ ಮಂಡಳಿ ಸಭೆ ಕೆಲ ಶಿಫಾರಸುಗಳನ್ನು ಮಾಡಿದೆ. ಜಿಎಸ್​ಟಿ ಮಂಡಳಿಯ 48ನೇ ಸಭೆ 2022 ಡಿಸೆಂಬರ್ 17ರಂದು ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆದಿತ್ತು. ಭೌತಿಕ ಸಾಕ್ಷ್ಯವನ್ನು ನಾಶಪಡಿಸುವುದು ಸೇರಿದಂತೆ ಮೂರು ವಿವಿಧ ಬಗೆಯ ಅಪರಾಧಗಳನ್ನು ಅಪರಾಧವಲ್ಲವೆಂದು ಪರಿಗಣಿಸಲು (ಡಿಕ್ರಿಮಿನಲೈಸ್) ಈ ಸಭೆಯಲ್ಲಿ ಶಿಫಾರಸು ಮಾಡಲಾಗಿತ್ತು. ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿ ಅಥವಾ ತಡೆ ಮತ್ತು ಮಾಹಿತಿ ನೀಡಲು ವೈಫಲ್ಯ ಇನ್ನೆರಡು ಅಪರಾಧಗಳಾಗಿವೆ.

ರಾಜ್ಯದ ಪಾಲು 1,934 ಕೋಟಿ ರೂ.

ಬೆಂಗಳೂರು: ರಾಜ್ಯಕ್ಕೆ ಬರಬೇಕಾಗಿದ್ದ 2022ರ ಜೂನ್​ವರೆಗಿನ ಜಿಎಸ್​ಟಿ ಪರಿಹಾರ ಬಾಕಿ ಮೊತ್ತ 1,934 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಶನಿವಾರ ಚುಕ್ತಾ ಮಾಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರಂತರ ಪ್ರಯತ್ನ ಕೊನೆಗೂ ಫಲಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್​ಟಿ ಮಂಡಳಿ ಸಭೆಯು 23 ರಾಜ್ಯಗಳಿಗೆ ಬಾಕಿ ಉಳಿಸಿಕೊಂಡಿದ್ದ 16,982 ಕೋಟಿ ರೂ. ಪಾವತಿಸಲು ಒಪ್ಪಿಗೆ ನೀಡಿದೆ. ಈ ಪೈಕಿ ಕರ್ನಾಟಕದ ಬಾಕಿ ಮೊತ್ತ 1,934 ಕೋಟಿ ರೂ. ಸೇರಿದೆ.

ತೆಳು ಬೆಲ್ಲಕ್ಕೆ ಜಿಎಸ್​ಟಿ ಇಲ್ಲ: ತೆಳು ಬೆಲ್ಲ (ಜೋನಿ ಬೆಲ್ಲ) ಮೇಲಿನ ಜಿಎಸ್​ಟಿಯನ್ನು ಈಗಿರುವ ಶೇಕಡ 18ರಿಂದ ಶೂನ್ಯ ಅಥವಾ ಶೇ.5ಕ್ಕೆ ಇಳಿಸಲು ಮಂಡಳಿ ಸಭೆ ನಿರ್ಧರಿಸಿತು. ತೆಳು ಬೆಲ್ಲ ಉತ್ತರ ಪ್ರದೇಶ ಮತ್ತು ಬೆಲ್ಲ ತಯಾರಿಸುವ ಎಲ್ಲ ರಾಜ್ಯಗಳಲ್ಲಿ ಸಿಗುವ ಒಂದು ವಿಶಿಷ್ಟ ಬಗೆಯ ದ್ರವ ಬೆಲ್ಲವಾಗಿದೆ. ಕರ್ನಾಟಕದಲ್ಲೂ ಇದು ಲಭ್ಯ. ಚಿಲ್ಲರೆಯಾಗಿ ಮಾರಿದರೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ಪ್ಯಾಕೇಜ್ ್ಡ ಅಥವಾ ಲೇಬಲ್ಡ್ ಆದರೆ ಶೇ.5 ಜಿಎಸ್​ಟಿ ಇರಲಿದೆ ಎಂದು ವಿತ್ತ ಮಂತ್ರಿ ವಿವರಿಸಿದರು. ಟ್ಯಾಗ್​ಗಳು, ಟ್ರಾ್ಯಕಿಂಗ್ ಸಾಧನಗಳು ಅಥವಾ ಬೆಲೆಬಾಳುವ ಕಂಟೇನರ್​ಗಳ ಮೇಲೆ ಲಗತ್ತಿಸುವ ಡೇಟಾ ಲಾಗರ್ಸ್ ಮೇಲಿನ ಜಿಎಸ್​ಟಿಯನ್ನು ಕೆಲವು ಷರತ್ತುಗಳಿಗೆ ಒಳಪಟ್ಟು ಶೇಕಡ 18ರಿಂದ ಶೂನ್ಯಕ್ಕೆ ಇಳಿಸಲಾಗಿದೆ. ಪೆನ್ಸಿಲ್ ಶಾರ್ಪನರ್ ಜಿಎಸ್​ಟಿಯನ್ನು ಶೇ. 18ರಿಂದ ಶೇ.12ಕ್ಕೆ ಇಳಿಸಲಾಗಿದೆ.

ಶಿಫಾರಸು ಅಂಗೀಕಾರ: ಪಾನ್ ಮಸಾಲಾ ಮತ್ತು ಗುಟ್ಕಾ ಮೇಲಿನ ಸಾಮರ್ಥ್ಯ ಆಧಾರಿತ ತೆರಿಗೆ (ಕೆಪಾಸಿಟಿ ಬೇಸ್ಡ್ ಟ್ಯಾಕ್ಸೇ ಶನ್) ಕುರಿತು ಸಚಿವರ ಗುಂಪು ಮಾಡಿದ ಶಿಫಾರಸನ್ನು ಜಿಎಸ್​ಟಿ ಮಂಡಳಿ ಸಭೆ ಅಂಗೀಕರಿಸಿದೆ.

ಸಭೆಯ ಇತರ ನಿರ್ಧಾರಗಳು

  • ಧಾನ್ಯಗಳ ಹೊಟ್ಟು ಮತ್ತು ಚಾಕುಗಳಿಗೆ ಶೇ.5ರಿಂದ ಶೂನ್ಯ ತೆರಿಗೆ
  • ತೊಳೆದ ಕಲ್ಲಿದ್ದಲು ಅಥವಾ ಅಂಥ ಘಟಕಗಳಿಂದ ಸರಬರಾಜು ಮಾಡುವ ಕಲ್ಲಿದ್ದಲು ತಿರಸ್ಕಾರಗೊಂಡಲ್ಲಿ ಅಂಥ ವಹಿವಾಟುಗಳಿಗೆ ಶೂನ್ಯ ಜಿಎಸ್​ಟಿ.
  • ಕೋರ್ಟ್​ಗಳು ಮತ್ತು ನ್ಯಾಯಾಧಿಕರಣಗಳ ಸೇವೆಗಳಿಗೆ ರಿವರ್ಸ್-ಚಾರ್ಜ್ ವ್ಯವಸ್ಥೆಯಡಿ ತೆರಿಗೆ ಹೇರಿಕೆ.