ಅಗ್ನಿ ಚಾಮುಂಡಿ ದೇವಿಯ ವಾರ್ಷಿಕ ತೆರೆ ಮಹೋತ್ಸವದಲ್ಲಿ ಭಕ್ತರನ್ನು ಆಶೀರ್ವದಿಸುತ್ತಿರುವ ಭೈರವ ತೆರೆ ಹಾಗೂ ಅಗ್ನಿ ಚಾಮುಂಡಿ ತೆರೆ.  
ನ್ಯೂಸ್

ಅಗ್ನಿ ಚಾಮುಂಡಿ ವಾರ್ಷಿಕ ತೆರೆ ಮುಕ್ತಾಯ

ವಿರಾಜಪೇಟೆ : ಎರಡು ದಿನಗಳ ಕಾಲ ನಡೆದ ಅಗ್ನಿ ಚಾಮುಂಡಿ ದೇವಿಯ ವಾರ್ಷಿಕ ತೆರೆ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಭಾನುವಾರ ಸಂಪನ್ನಗೊಂಡಿತು.

ವಿರಾಜಪೇಟೆ ತಾಲೂಕು ಬಾಳುಗೋಡು ಪೆರುಂಬಾಡಿ ಗ್ರಾಮದ ಅಗ್ನಿ ಚಾಮುಂಡಿ ದೇವಿಯ 31ನೇ ವಾರ್ಷಿಕ ತೆರೆ ಮಹೋತ್ಸವದ ಮೊದಲ ದಿನ ಬೆಳಗ್ಗೆ ಗಣಪತಿ ಹೋಮ, ಪ್ರಧಾನ ಹೋಮ, ನವ ಕಳಸ, ಆಶ್ಲೇಷ ಬಲಿ ನಡೆಯಿತು. ತಕ್ಕರ ಮನೆಯಿಂದ ಭಂಡಾರ ತರಲಾಯಿತು.ನಾಗದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಚಾಮುಂಡೇಶ್ವರಿಗೆ ಅಭಿಷೇಕ ನಡೆದು ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಮೂರು ದಿನಗಳ ಕಾಲ ಹಸಿ ಮರ ಕಡಿದು ದೇವಾಲಯದ ಆವರಣದಲ್ಲಿ ನಿರ್ಮಾಣ ಮಾಡಲಾಗಿದ್ದ ಬೃಹತ್ ಅಗ್ನಿಕೊಂಡಕ್ಕೆ ಅಗ್ನಿ ಸ್ಪರ್ಶಿಸಲಾಯಿತು.

ಕುಟ್ಟಂದಿ ಕುತ್ತುನಾಡ್ ಗ್ರಾಮದ ಕಿಶನ್ ಪಣಿಕ್ಕರ್ ಅವರ ನೇತೃತ್ವದಲ್ಲಿ ಕ್ರಮವಾಗಿ ವಿಷ್ಣುಮೂರ್ತಿ ತೋಟಂ, ಚಾಮುಂಡಿ ಅಮ್ಮ ತೋಟಂ, ಕುಟ್ಟಿಚಾತನ್ ತೆರೆ, ಭೈರವ ತೆರೆ, ಕರಿವಾಳ್ ಭಗವತಿ ಮತ್ತು ಉಚ್ಚುಟಮ್ಮ ತೆರೆಗಳು ಮುಂಜಾನೆಯವರೆಗೂ ನಡೆದವು. ಎರಡನೇ ದಿನ ಭಾನುವಾರ ಬೆಳಗ್ಗೆ ಶ್ರೀ ಚಾಮುಂಡಿ ( ವಿಷ್ಣುಮೂರ್ತಿ ಕೋಲ) ಬೃಹತ್ ಕೊಂಡೋತ್ಸವ ನಡೆಯಿತು. ಗುಳಿಗನ್ ತೆರೆ, ಚಾಮುಂಡಿ ಅಮ್ಮ ತೆರೆ ನಡೆಯಿತು. ಎರಡು ದಿನಗಳ ಕಾಲ ನಡೆದ ಉತ್ಸವದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ತಕ್ಕರಾದ ಕಬ್ಬಚ್ಚೀರ ಕುಟುಂಬ ವರ್ಗದ ಅಧ್ಯಕ್ಷ ಕೊಕ್ಕಲೆಮಾಡ ಮಣಿ, ಕಾರ್ಯದರ್ಶಿ ಟಿ.ಜಿ.ಗಣೇಶ್, ಅರ್ಚಕರು, ದೈವ ನರ್ತಕರು, ಸಮಿತಿಯ ಸದಸ್ಯರು, ವಿವಿಧ ಗ್ರಾಮಗಳಿಂದ ಆಗಮಿಸಿದ ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಂಡಿದ್ದರು.