ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲವಾಡ ಹಾಗೂ ಸಿಬ್ಬಂದಿ ಒತ್ತುವರಿ ತೆರವು ಕಾರ್ಯಾಚರಣೆ ಜಾಗದಲ್ಲಿ ಮೊಕ್ಕಾಂ ಹೂಡಿರುವುದು 
ನ್ಯೂಸ್

ಒಕ್ಕಲೆಬ್ಬಿಸುತ್ತಿರುವ ಅರಣ್ಯ ಇಲಾಖೆ ವಿರುದ್ದ ಧರಣಿ; ಸ್ಥಳಕ್ಕೆ ಭೇಟಿ ನೀಡುವುದಾಗಿ ಸಚಿವ ಖಂಡ್ರೆ ಭರವಸೆ

Bengaluru - Political - Shivananda Tagadur

ಬೆಂಗಳೂರು:
ಸಾಗುವಳಿ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ಬಡ ರೈತರನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸುತ್ತಿರುವುದನ್ನು ವಿರೋಧಿಸಿ ಎಂದು ಕೋಲಾರ ಸಂಸದ ಮುನಿಸ್ವಾಮಿ, ರಾಜ್ಯ ಸಭೆ ಸದಸ್ಯ ಈರಣ್ಣ ಕಡಾಡಿ ಅವರುಗಳು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಗುರುವಾರ ಸಂಜೆ ಪ್ರತಿಭಟನೆ ನಡೆಸಿದರು.
ಶ್ರೀನಿವಾಸಪುರ ತಾಲೂಕಿನಲ್ಲಿ ಒತ್ತುವರಿ ನೆಪದಲ್ಲಿ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲಾಗಿದೆ. ಜೆಸಿಬಿ ತಂದು ಮಾವಿನ ತೋಟ, ತೆಂಗಿನ ತೋಟಗಳನ್ನು ತೆರವು ಮಾಡಲಾಗುತ್ತಿದೆ. ಹತ್ತಾರು ವರ್ಷದಿಂದ ಸಾಗುವಳಿ ಮಾಡಿರುವ ರೈತರು ಬೀದಿಗೆ ಬಂದು ನಿಲ್ಲುವಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ವಿನಾ ಕಾರಣ ರೈತರಿಗೆ ಕಿರುಕುಳ ನೀಡುತ್ತಿರುವ ಡಿಎ್ಒ ಅವರನ್ನು ಕೂಡಲೆ ವರ್ಗ ಮಾಡಬೇಕು. ಸಂಬಂದಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು. ಬಡ ರೈತರಿಗೆ ಅನ್ಯಾಯವಾಗದಂತೆ ಸರ್ಕಾರ ರಕ್ಷಣೆ ನೀಡಬೇಕು ಎಂದು ಸಂಸದರು ಆಗ್ರಹಿಸಿದರು.

ಸ್ಥಳಕ್ಕೆ ಭೇಟಿ ನೀಡುವ
ಭರವಸೆ ನೀಡಿದ ಸಚಿವ
ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ತಾವು ನನ್ನ ಗಮನಕ್ಕೆ ತಂದಿರುವ ಎಲ್ಲ ವಿಷಯಗಳನ್ನು ಪರಿಶೀಲಿಸುತ್ತೇನೆ. ಯಾವುದೇ ಕಾರಣಕ್ಕೂ ಸಣ್ಣ ಪುಟ್ಟ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಆದರೆ, ಭೂಗಳ್ಳರು ಮಾಡಿಕೊಂಡಿರುವ ಒತ್ತುವರಿ ತೆರವು ನಿಲ್ಲಿಸುವುದಿಲ್ಲ ಎಂದು ಭರವಸೆ ನೀಡಿದರು.
ಒತ್ತುವರಿ ಸಮಸ್ಯೆ ಬಗ್ಗೆ ಶುಕ್ರವಾರ ವಿಕಾಸಸೌಧದಲ್ಲಿ ಸಭೆಯನ್ನು ಕರೆದಿದ್ದು, ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ಕೈ ಬಿಡಲಾಯಿತು.

ಪೋಟೋ: ಈರಣ್ಣ ಕಡಾಡಿ1