ನ್ಯೂಸ್

ನೇರ ನೇಮಕಾತಿ ವಯೋಮಿತಿ ಸಡಿಲಿಕೆ | Maximum 3 years

ಮೃತ್ಯುಂಜಯ ಕಪಗಲ್

ಬೆಂಗಳೂರು: ರಾಜ್ಯ ಸರ್ಕಾರದ ನೇರ ನೇಮಕಾತಿಗಳಿಗೆ ಒಂದು ಬಾರಿಗೆ ಅನ್ವಯಿಸಿ ಗರಿಷ್ಠ ವಯೋಮಿತಿ ಸಡಿಲಿಕೆಯನ್ನು ಮೂರು ವರ್ಷಗಳಿಗೆ ವಿಸ್ತರಿಸುವ ಮಹತ್ವದ ಆದೇಶ ಸೋಮವಾರ ಪ್ರಕಟವಾಗಿದೆ.

ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣ ಮಾತ್ರವೊಂದೇ ಅಲ್ಲ, ವಿವಿಧ ಕಾರಣಗಳಿಗಾಗಿ ಎರಡು ವರ್ಷಗಳಿಂದ ಸರ್ಕಾರ ಹುದ್ದೆಗಳಿಗೆ ನೇಮಕಾತಿಗಳಾಗಿಲ್ಲ. ಹೀಗಾಗಿ ನೇಮಕಾತಿ ವಯೋಮಿತಿ ಸಡಿಲಿಸಬೇಕೆಂಬ ಬೇಡಿಕೆ, ಒತ್ತಡಗಳಿಗೆ ರಾಜ್ಯ ಸರ್ಕಾರ ಕೊನೆಗೂ ಮಣಿದಿದೆ.

ಈ ಮೊದಲು ನೀಡಿದ್ದ ಎರಡು ವರ್ಷಗಳ ವಯೋಮಿತಿ ಸಡಿಲಿಕೆಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಣೆ ಮಾಡಿದೆ. ಅಂದರೆ ಒಂದು ಬಾರಿಗೆ ಮಾತ್ರ ಗರಿಷ್ಠ ವಯೋಮಿತಿ ಸಡಿಲಿಕೆ ಮೂರು ವರ್ಷಗಳಿಗೆ ಏರಿಸಿದ್ದು, ಎಲ್ಲ ಪ್ರವರ್ಗಗಳಿಗೆ ಅನ್ವಯಿಸಿದೆ.

ಆದೇಶದಲ್ಲಿ ಏನಿದೆ ?

ವಯೋಮಿತಿ ಸಡಿಲಿಕೆಗೆ ಸಂಬಂಧಿಸಿದಂತೆ ಸೆ.6ರಂದು ಹೊರಡಿಸಿದ್ದ ಆದೇಶ ಹಿಂಪಡೆದು, ಈ ಆದೇಶ ಹೊರಡಿಸಿದ ದಿನಾಂಕ (29-9-2025)ದಿಂದ ಮುಂದಿನ ದಿನಾಂಕ 27-12-2027ರವರೆಗೆ ನೇರ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿ ಹೊರಡಿಸುವ ಅಧಿಸೂಚನೆ ಅನ್ವಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಆಯಾ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ ಮೂರು ವರ್ಷಗಳವರೆಗೆ ಸಡಿಲಿಕೆ ನೀಡಲಾಗಿದೆ.

ಈ ಹಿಂದೆ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ ಎರಡು ವರ್ಷಗಳ ಸಡಿಲಿಕೆ ನೀಡಿ ಆದೇಶಿಸಲಾಗಿತ್ತು. ನಂತರ ಹಲವಾರು ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಮನವಿ ಸಲ್ಲಿಸಿ, ರಾಜ್ಯ ನಾಗರಿಕ ಸೇವೆಗಳಿಗೆ ಮಾಡುವ ನೇರ ನೇಮಕಾತಿಯಲ್ಲಿ ಗರಿಷ್ಠ ವಯೋಮಿತಿಯಲ್ಲಿ ಐದು ವರ್ಷಗಳ ಸಡಿಲಿಕೆ ನೀಡಲು ಕೋರಿದ್ದರು.

ಈ ಮನವಿಗಳನ್ನು ಸರ್ಕಾರವು ಪರಿಶೀಲಿಸಿ ಒಂದು ಬಾರಿಗೆ ಮಾತ್ರ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆ ನೀಡಲು ತೀರ್ಮಾನಿಸಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿದ ಆದೇಶದ ಪ್ರಸ್ತಾವನೆಯಲ್ಲಿ ವಿವರಿಸಿದೆ.