ಬೆಂಗಳೂರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿನ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದ 97 ‘ಪಂಚಾಯಿತಿ ಅಭಿವೃದ್ಧಿ ಅಧಿಕಾರಿ’ (ಪಿಡಿಒ) ಹುದ್ದೆಗಳಿಗೆ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆಯನ್ನು ನೀಡಿ ಕರ್ನಾಟಕ ಲೋಕಸೇವಾ ಆಯೋಗವು ತಿದ್ದುಪಡಿ ಅಧಿಸೂಚನೆ ಹೊರಡಿಸಿದೆ.
ನೇಮಕಾತಿಗೆ ಈ ಹಿಂದೆ ತಾಂತ್ರಿಕ ಕಾರಣಗಳಿಂದ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಸಾಧ್ಯವಾಗದ ಅಭ್ಯರ್ಥಿಗಳು ಸೆ.18ರಿಂದ ಅ.3ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ಕಲ್ಪಿಸಲಾಗಿದೆ ಎಂದು ಕೆಪಿಎಸ್ಸಿ ಡಾ. ಕೆ. ರಾಕೇಶ್‌ಕುಮಾರ್ ತಿಳಿಸಿದ್ದಾರೆ.
ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ಇಲಾಖೆಗಳ ಗ್ರೂಪ್- ಬಿ ಮತ್ತು ಗ್ರೂಪ್ ಸಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ಹೊರಡಿಸಲಾಗಿರುವ ಅಧಿಸೂಚನೆಗಳಿಗೆ ಹಾಗೂ ಮುಂದಿನ ಒಂದು ವರ್ಷದಲ್ಲಿ ಹೊರಿಸಲಿರುವ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆಯನ್ನು ನೀಡಿ ಆದೇಶಿಸಿದೆ.
ಈ ಹಿನ್ನೆಲೆಯಲ್ಲಿ ಪಿಡಿಒ ಹುದ್ದೆಗಳ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ. ಹೊಸ ಅಧಿಸೂಚನೆ ಪ್ರಕಾರ ಸಾಮಾನ್ಯ ವರ್ಗಕ್ಕೆ 38 ವರ್ಷ, ಒಬಿಸಿ 41 ವರ್ಷ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳು 43 ವರ್ಷದವರೆಗೂ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ. ಅರ್ಜಿ ಸಲ್ಲಿಸಲು ಮಾತ್ರ ಅವಕಾಶ ನೀಡಲಾಗಿದ್ದು, ಪರೀಕ್ಷಾ ದಿನಾಂಕಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.