ಬೆಂಗಳೂರು: ವೇದಾಗಮ ವ್ಯಾಸಂಗ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸುವ ಘಟಿಕೋತ್ಸವಕ್ಕೆ 20 ವರ್ಷಗಳ ನಂತರ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮರು ಚಾಲನೆ ನೀಡಿದ್ದಾರೆ.
ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ೆ.20 (ಶುಕ್ರವಾರ)ರ ಬೆಳಗ್ಗೆ 11ಕ್ಕೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಹಿರಿಯ ಮಠಾಧೀಶರ ಸಾನ್ನಿಧ್ಯವಹಿಸಲಿದ್ದಾರೆ. ನಾಡೋಜ ಡಾ.ಭಾಷ್ಯಂ ಸ್ವಾಮೀಜಿ ಘಟಿಕೋತ್ಸವ ಭಾಷಣ ಮಾಡುವರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸೇರಿ ಹಲವು ಸಚಿವರು, ಜನಪ್ರತಿನಿಧಿಗಳು ಸಾಕ್ಷಿಯಾಗಲಿದ್ದಾರೆ.
ಐದು ವರ್ಷಗಳಿಂದ ಆಗಮ ಪ್ರಸಿದ್ಧ, ಪರೀಕ್ಷೆಗಳ ಪ್ರವರ ಮತ್ತು ಪ್ರವೀಣ ವಿಭಾಗಗಳಲ್ಲಿ ಉತ್ತೀರ್ಣರಾದ 38 ಆಗಮ ವಿದ್ಯಾಲಯಗಳ ಘಟಿಕೋತ್ಸವಕ್ಕೆ ನೋಂದಾಯಿತ ಎರಡು ಸಾವಿರ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಗುತ್ತದೆ.
ಮುಜರಾಯಿ ಇಲಾಖೆ ನಡೆಸುವ ಆಗಮ ಶಿಕ್ಷಣ ಮತ್ತು ಪರೀಕ್ಷಾ ಸಮಿತಿಯಿಂದ ಶಿವ ಸಂಬಂಧವಾದ ಶೈವಾಗಮ, ವೀರಶೈವಾಗಮ, ವಾತುಲಾಗಮ ವಿಷ್ಣು ಸಂಬಂಧವಾದ ಪಾಂಚರಾತ್ರಾಗಮ, ವೈಖಾನಸಾಗಮ, ತಂತ್ರಸಾರಾಗಮ ಮತ್ತು ಜೈನಾಗಮ ಸೇರಿ ಏಳು ಆಗಮಗಳ ಶಿಕ್ಷಣ ನೀಡಲಾಗುತ್ತದೆ.
ಕೋವಿಡ್ ಕಾರಣಕ್ಕೆ 2019-20 ರಿಂದ 2021-22ನೇ ಸಾಲಿನ ಪ್ರಸಿದ್ಧ ಪರೀಕ್ಷೆಗಳನ್ನು 2022ರಲ್ಲಿ ಒಂದೇ ಪರೀಕ್ಷೆಯ ಮೂಲಕ ನಡೆಸಲಾಗಿದೆ. ಸರ್ವಾಗಮ ಪ್ರಸಿದ್ಧ ಪರೀಕ್ಷೆಗೆ 2,258 ಹಾಜರಾಗಿದ್ದು, 936 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಪ್ರವೀಣ ಪ್ರಸಿದ್ಧ ಪರೀಕ್ಷೆ ತೆಗೆದುಕೊಂಡ 593 ವಿದ್ಯಾರ್ಥಿಗಳಲ್ಲಿ 348 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2022-23 ಹಾಗೂ 2023-24ನೇ ಸಾಲಿನ ಪರೀಕ್ಷೆಗಳನ್ನು 2024ರಲ್ಲಿ ನಡೆಸಲಾಗಿದೆ.
ಪ್ರಸಿದ್ಧ ಪರೀಕ್ಷೆ ತೆಗೆದುಕೊಂಡ 1,245 ವಿದ್ಯಾರ್ಥಿಗಳಲ್ಲಿ 419 ಹಾಗೂ ಪ್ರವೀಣ ಪ್ರಸಿದ್ಧ ಪರೀಕ್ಷೆಗೆ ಹಾಜರಾಗಿದ್ದ 462 ವಿದ್ಯಾರ್ಥಿಗಳ ಪೈಕಿ 216 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಅಲ್ಲದೆ, 2006 ರಿಂದ 2019 ಇಸವಿಯವರೆಗೆ ನಡೆಸಲಾದ ಸರ್ವಾಗಮ ಪ್ರವರ ಹಾಗೂ ಪ್ರವೀಣ ಪ್ರಸಿದ್ಧ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಮುಂದಿನ ಮೂರು ತಿಂಗಳೊಳಗೆ ಘಟಿಕೋತ್ಸವ ಆಯೋಜಿಸಿ ಪ್ರಮಾಣಪತ್ರ ವಿತರಿಸಲಾಗುತ್ತದೆ ಎಂದು ಅಧಿಕೃತ ವರದಿ ತಿಳಿಸಿದೆ.