ನ್ಯೂಸ್

ಮತ್ತೆ ಬೆಲೆಯೇರಿಕೆ ಬರೆ: ತೆರಿಗೆ ಭಾರ ಹೆಚ್ಚಿಸಿದ ಜಿಎಸ್​ಟಿ; ಮಂಡಳಿ 47ನೇ ಸಭೆಯಲ್ಲಿ ನಿರ್ಧಾರ..

ಚಂಡೀಗಢ: ನಿಯಂತ್ರಣಕ್ಕೆ ಸಿಗದ ಹಣದುಬ್ಬರದಿಂದಾಗಿ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವ ನಡುವೆಯೇ, ಕೇಂದ್ರ ಸರ್ಕಾರವೂ ಜನಸಾಮಾನ್ಯರ ಮೇಲೆ ತೆರಿಗೆ ಹೆಚ್ಚಳದ ಹೊರೆಯನ್ನು ಹೇರಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಂಡಳಿಯ 47ನೇ ಸಭೆ ಹಲವು ವಸ್ತು ಹಾಗೂ ಸೇವೆಗಳ ಮೇಲಿನ ತೆರಿಗೆಯನ್ನು ಬದಲಾವಣೆ ಮಾಡಿ ನಿರ್ಧಾರ ಕೈಗೊಂಡಿದೆ. ಪ್ರಿ-ಪ್ಯಾಕ್ ಮತ್ತು ಪ್ರಿ-ಪ್ಯಾಕ್ ಲೇಬಲ್ ಹಾಕಿರುವ ಆಹಾರ ಪದಾರ್ಥಗಳ ಮೇಲೆ ತೆರಿಗೆ ವಿಧಿಸಲಾಗಿದ್ದರೆ, ಕೆಲ ವಸ್ತುಗಳ ಕರ ಕಡಿಮೆ ಮಾಡಲಾಗಿದೆ. ಈ ಬದಲಾವಣೆಗಳು ಜುಲೈ 18ರಿಂದ ಜಾರಿಗೆ ಬರಲಿವೆ.

ಕೆಲವು ವಸ್ತು ಮತ್ತು ಸೇವೆಗಳ ತೆರಿಗೆ ಹೆಚ್ಚಳ ಮತ್ತು ತೆರಿಗೆ ವಿನಾಯಿತಿಯನ್ನು ರದ್ದು ಮಾಡುವುದಕ್ಕೆ ಎರಡು ಸಮಿತಿಗಳು ಸಲ್ಲಿಸಿದ್ದ ಮಧ್ಯಂತರ ವರದಿಗೆ ಸಭೆ ಸಮ್ಮತಿ ಸೂಚಿಸಿದೆ. ಕ್ಯಾಸಿನೊ, ಆನ್​ಲೈನ್ ಗೇಮ್ ಲಾಟರಿ, ಕುದುರೆ ರೇಸ್​ಗಳ ಮೇಲೆ ಶೇ.28ರಷ್ಟು ತೆರಿಗೆ ವಿಧಿಸಬೇಕು ಎಂಬ ಶಿಫಾರಸನ್ನು ಮರುಪರಿಶೀಲನೆ ನಡೆಸಿ ಜುಲೈ 15ಕ್ಕೆ ಹೊಸ ವರದಿ ಸಲ್ಲಿಸುವಂತೆ ಸಚಿವರ ಗುಂಪಿನ ಸಮಿತಿಗೆ ಸೂಚಿಸಿದೆ. ಹಾಗೆಯೇ ಜಿಎಸ್​ಟಿ ಸ್ಲ್ಯಾಬ್ ಪರಿಷ್ಕರಣೆ ಕುರಿತು ಮೂರು ತಿಂಗಳಲ್ಲಿ ವರದಿ ಸಲ್ಲಿಸಲು ತಿಳಿಸಿದೆ. ಗುರುವಾರಕ್ಕೆ ಕೊನೆಗೊಳ್ಳಲಿರುವ (ಜು.30) ರಾಜ್ಯಗಳಿಗೆ ನೀಡುವ ಪರಿಹಾರವನ್ನು ಮುಂದುವರಿಸಬೇಕು ಎಂಬ ಮನವಿಯ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. 12ಕ್ಕೂ ಹೆಚ್ಚು ರಾಜ್ಯಗಳು ಜಿಎಸ್​ಟಿ ಪರಿಹಾರ ಮುಂದುವರಿಸಲು ಒತ್ತಾಯಿಸಿವೆ.

ಆಯ್ಕೆಗೆ ಅವಕಾಶ: ರಸ್ತೆ ಸಾರಿಗೆ ಸೇವಾದಾತರಿಗೆ ಐಟಿಸಿ ಹೊರತಾಗಿ ಶೇ.5, ಐಟಿಸಿಸಹಿತವಾಗಿ ಶೇ.12ರಷ್ಟು ತೆರಿಗೆ ವಿಧಿಸುವ ಆಯ್ಕೆ ನೀಡಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷೆಯಲ್ಲಿ ಮಂಗಳವಾರ ಮತ್ತು ಬುಧವಾರ ನಡೆದ ಈ ಸಭೆಯಲ್ಲಿ ರಾಜ್ಯಗಳ ಹಣಕಾಸು ಮಂತ್ರಿಗಳು ಹಾಗೂ ರಾಜ್ಯಗಳಿಂದ ನಿಯೋಜಿತರಾಗಿದ್ದ ಪ್ರತಿನಿಧಿಗಳು ಭಾಗಿಯಾಗಿದ್ದರು. ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ ನೇತೃತ್ವದ ಸಮಿತಿಗಳು ತೆರಿಗೆ ಪರಿಷ್ಕರಣೆ ಕುರಿತು ಮಧ್ಯಂತರ ವರದಿಯನ್ನು ಮಂಡಿಸಿದ್ದವು.

ತೆರಿಗೆ ಇಳಿಕೆ

  • ಶೇ. 12ರಿಂದ 5: ಅಸ್ಟೋಮಿ (ಶಸ್ತ್ರಚಿಕಿತ್ಸೆ) ವೈದ್ಯಕೀಯ ಪರಿಕರ, ವಸ್ತುಗಳು, ಮೂಳೆ ಸಂಬಂಧಿ ರೋಗಗಳ ಚಿಕಿತ್ಸೆಗೆ ಬಳಸುವ ವಸ್ತುಗಳು ಹಾಗೂ ಕೃತಕ ಅಂಗ.
  • ಶೇ. 18ರಿಂದ 5: ರೋಪ್ ವೇ ಪಯಣ ಅಥವಾ ಸರಕು ಸಾಗಣೆ (ಸೇವೆ ಇನ್​ಪುಟ್ ಕ್ರೆಡಿಟ್ ನೀಡಲಾಗಿದೆ)
  • ಶೇ.18ರಿಂದ 12: ಇಂಧನ ವೆಚ್ಚವನ್ನು ಒಳಗೊಂಡ ನಿರ್ವಾಹಕರಸಹಿತ ಸರಕು ಸಾಗಣೆ

ಐಜಿಎಸ್​ಟಿಯಿಂದ ವಿನಾಯಿತಿ: ಕ್ರಿಮಿ-ಕೀಟಗಳಿಂದ ಹರಡುವ ಸಾಂಕ್ರಾಮಿಕ ರೋಗಗಳ ತಡೆಯ ರಾಷ್ಟ್ರೀಯ ಕಾರ್ಯಕ್ರಮಕ್ಕೆ ವಿದೇಶದಿಂದ ಪೂರೈಕೆಯಾಗುವ ಮಾತ್ರೆಗಳು, ಖಾಸಗಿ ಸಂಸ್ಥೆಗಳು ಆಮದು ಮಾಡಿಕೊಳ್ಳುವಂತಹ ಮತ್ತು ರಕ್ಷಣಾ ಪಡೆಗಳ ಬಳಕೆಗೆ ನೀಡುವಂತಹ ಉಪಕರಣಗಳನ್ನು ಐಜಿಎಸ್​ಟಿಯಿಂದ ಹೊರಗಿಡಲಾಗಿದೆ. ಪ್ಯಾಕ್ ಮಾಡದ, ಲೇಬಲ್ ಇಲ್ಲದ ಆಹಾರ ಪದಾರ್ಥಗಳಿಗೆ ತೆರಿಗೆ ಇಲ್ಲ.

ರಾಜ್ಯಗಳಿಗೆ ಆಗುವ ನಷ್ಟವನ್ನು ತುಂಬಿಕೊಡಲು ನೀಡಲಾಗುತ್ತಿದ್ದ ಪರಿಹಾರದ ಅವಧಿ ಜೂ.30ಕ್ಕೆ ಕೊನೆಗೊಂಡಿದೆ. ಇದನ್ನು ಮತೆôದು ವರ್ಷ ಅಥವಾ ಕೆಲವು ಕಾಲ ಮುಂದುವರಿಸುವಂತೆ ಹಲವು ರಾಜ್ಯಗಳು ಮನವಿ ಮಾಡಿದ್ದವು. ಆದರೆ, ರಾಜ್ಯಗಳು ವರಮಾನದ ಮೂಲ ಕಂಡುಕೊಳ್ಳಬೇಕೆ ಹೊರತು ಕೇಂದ್ರದ ಮೇಲೆಯೇ ಅವಲಂಬನೆ ಆಗಬಾರದು. | ನಿರ್ಮಲಾ ಸೀತಾರಾಮನ್ ಜಿಎಸ್​ಟಿ ಮಂಡಳಿ ಅಧ್ಯಕ್ಷೆ ಪ್ರಧಾನಿ ಮೋದಿಯವರ ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಈಗ ಪ್ರಿ-ಪ್ಯಾಕ್ ಆಹಾರ ಪದಾರ್ಥಗಳ ಮೇಲೆ ತೆರಿಗೆ ಹೇರಿರುವ ಮೂಲಕ ‘ಗೃಹಸ್ತಿ ಸರ್ವನಾಶ ಟ್ಯಾಕ್ಸ್’ ಆಗಿದೆ. ಜನರ ಆದಾಯ ಕಸಿಯುವ, ಉದ್ಯೋಗ ಕಸಿಯುವ ಮತ್ತು ಹಣದುಬ್ಬರ ಹೆಚ್ಚಿಸುವ ಕ್ರಮ ಇದಾಗಿದೆ. | ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ಸಣ್ಣ ಉದ್ದಿಮೆಗಳಿಗೆ ನಿರಾಳ: ವಾರ್ಷಿಕವಾಗಿ 40 ಲಕ್ಷ ರೂಪಾಯಿ ವಹಿವಾಟು ನಡೆಸುವ ಉದ್ದಿಮೆ, ಸರಕು, ಸೇವೆ ಕಲ್ಪಿಸುವ ಹಾಗೂ ಆನ್​ಲೈನ್ ಮೂಲಕ ಸರಕು ಮಾರಾಟ ಮಾಡುವ 20 ಲಕ್ಷ ರೂಪಾಯಿಯೊಳಗಿನ ಕಂಪನಿಗಳಿಗೆ ಜಿಎಸ್​ಟಿ ಕಡ್ಡಾಯ ನೋಂದಣಿಯಿಂದ ವಿನಾಯಿತಿ ನೀಡಲಾಗಿದೆ. ಚಿನ್ನಾಭರಣ, ಹರಳುಗಳ ಸಾಗಣೆಯ ಇ-ವೇ ಬಿಲ್​ಗಳ ಬಗ್ಗೆ ರಾಜ್ಯ ಸರ್ಕಾರಗಳು ತೆರಿಗೆ ನಿರ್ಧಾರ ಮಾಡಲಿ ಎಂದು ಜಿಎಸ್​ಟಿ ಮಂಡಳಿ ಸಲಹೆ ನೀಡಿದೆ.

ಶ್ರೇಣಿವಾರು ಕರ ಹೆಚ್ಚಳ

  • ಶೇ.5: ಮೊಸರು, ಲಸ್ಸಿ, ಮಜ್ಜಿಗೆ, ಜೇನುತುಪ್ಪ, ಒಣಕಾಳು, ತರಕಾರಿ, ಮಾಂಸ, ಮೀನು.
  • ಶೇ.12: ನಕ್ಷೆ, (ಮ್ಯಾಪ್), ಅಟ್ಲಾಸ್
  • ಶೇ.18: ಚೆಕ್ ಬುಕ್ ವಿತರಣೆಗೆ ಬ್ಯಾಂಕ್​ಗಳು ವಿಧಿಸುವ ಸೇವಾ ಶುಲ್ಕ.
  • ಶೇ.5ರಿಂದ 12: ಪೆಟ್ರೋಲಿಯಂ/ಕೋಲ್​ಬೆಡ್ ಮಿಥೇನ್, ವೈಜ್ಞಾನಿಕ ಮತ್ತು ತಾಂತ್ರಿಕ ಉಪಕರಣಗಳು.
  • ಶೇ.5ರಿಂದ 18: ಇ-ತ್ಯಾಜ್ಯ
  • ಶೇ.12ರಿಂದ 18: ಎಲ್​ಇಡಿ ಲೈಟ್, ಪ್ರಿಂಟಿಂಗ್ ಇಂಕ್, ಚಾಕು, ಪೇಪರ್ ಕಟಿಂಗ್ ಬ್ಲೇಡ್, ಪೆನ್ಸಿಲ್ ಶಾರ್ಪನರ್, ಚಮಚ, ಫೋರ್ಕ್, ಸೌಟು, ಜಾಲರಿ ಸೌಟು, ಕೇಕ್ ಸರ್ವರ್ ಸಾಧನ, ವಾಟರ್ ಪಂಪ್, ಆಳದ ಬಾವಿಯ ಟರ್ಬೆನ್ ಪಂಪ್, ಸಬ್​ವುರ್ಸಿಬಲ್ ಪಂಪ್, ಬೈಸಿಕಲ್ ಪಂಪ್, ಬೀಜ, ಧಾನ್ಯಗಳನ್ನು ಸ್ವಚ್ಛಗೊಳಸುವ/ಸಂಸ್ಕರಣಾ ಯಂತ್ರ, ರುಬ್ಬುವ ಯಂತ್ರ.

ವಿನಾಯಿತಿ ಕೈಬಿಟ್ಟ ಸೇವೆ

  • ಆರ್​ಬಿಐ, ಐಆರ್​ಡಿಐ, ಸೆಬಿ, ಎಫ್​ಎಸ್​ಎಸ್​ಎಐಗಳ ಸೇವೆಗಳು
  • ಒಂದು ಸಾವಿರ ರೂ.ಗಿಂತ ಕಡಿಮೆ ಬಾಡಿಗೆ ಇರುವ ಹೋಟೆಲ್ ರೂಮ್ (ಶೇ.12 ತೆರಿಗೆ ಅನ್ವಯ)
  • ಐದು ಸಾವಿರ ರೂ. ಮೇಲ್ಪಟ್ಟ ಆಸ್ಪತ್ರೆ ವಾರ್ಡ್ (ಶೇ.5 ಟ್ಯಾಕ್ಸ್ ಪಾವತಿ)