ನ್ಯೂಸ್

ಬೆಂಗಳೂರಿಂದ ಗುಳೆ!

ಮತ್ತೆ ಮನೆಗಳು ಖಾಲಿ, 6000 ನಿರ್ಮಾಣ ಯೋಜನೆಗಳಿಗೆ ಪೆಟ್ಟು

  • ಗಿರೀಶ್ ಗರಗ ಬೆಂಗಳೂರು

ಮಹಾಮಾರಿ ಕರೊನಾದಿಂದಾಗಿ ಬೆಂಗಳೂರಿನಲ್ಲಿ ಎರಡನೇ ಸುತ್ತಿನ ಗುಳೆ ಶುರುವಾಗಿದೆ. ವೀಕೆಂಡ್ ಕರ್ಫ್ಯೂ ಹಾಗೂ ಅಘೋಷಿತ ಲಾಕ್​ಡೌನ್​ಗೆ ಬೆದರಿದ ಜನ ರಾಜಧಾನಿ ತೊರೆದು ಊರುಗಳತ್ತ ಹೊರಟಿದ್ದಾರೆ. ಇದರಿಂದ ಅಂದಾಜು 6 ಸಾವಿರ ನಿರ್ಮಾಣ ಯೋಜನೆಗಳಿಗೆ ಹೊಡೆತ ಬೀಳುವ ಆತಂಕ ಉಂಟಾಗಿದ್ದರೆ ಬಾಡಿಗೆ ಮನೆಗಳು ಖಾಲಿಯಾಗಿರುವ ಪರಿಣಾಮ ಮನೆಮಾಲೀಕರು ಆದಾಯವಿಲ್ಲದೆ ಕಂಗಾಲಾಗಿದ್ದಾರೆ.

ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿದ್ದ ಬೇರೆ ಬೇರೆ ಜಿಲ್ಲೆಗಳ ಜನತೆಯ ಜತೆಗೆ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ರಾಜಸ್ಥಾನ ಮುಂತಾದ ರಾಜ್ಯಗಳಿಂದ ಕೆಲಸಕ್ಕೆ ಬಂದಿದ್ದ ಸಾವಿರಾರು ಸಂಖ್ಯೆಯ ಕಾರ್ವಿುಕರು ಕಳೆದ ನಾಲ್ಕೈದು ದಿನಗಳಿಂದ ನಗರವನ್ನು ತೊರೆಯಲಾರಂಭಿಸಿದ್ದಾರೆ. ಪಾತ್ರೆ, ಪಗಡೆ ತುಂಬಿಕೊಂಡು ರೈಲುಗಳನ್ನೇರಿ ಊರಿನ ಹಾದಿ ಹಿಡಿದಿದ್ದಾರೆ.

ಕಾರ್ವಿುಕರ ಗುಳೆಯಿಂದಾಗಿ ನಿರ್ಮಾಣ ಹಾಗೂ ಇನ್ನಿತರ ಕ್ಷೇತ್ರಗಳಿಗೆ ಕಾರ್ವಿುಕರ ಕೊರತೆ ಕಾಡುವ ಆತಂಕ ಉಂಟಾಗಿದೆ. ಜಿಎಸ್​ಟಿ, ಅಬಕಾರಿ, ಸಾರಿಗೆ, ನೋಂದಣಿ ಮತ್ತು ಮುದ್ರಾಂಕಗಳಿಂದ ಸಂಗ್ರಹವಾಗುವ ರಾಜಸ್ವ ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಬೇಕಿರುವ ಪ್ರಮುಖ ಹಣಕಾಸಿನ ಮೂಲವಾಗಿವೆ. ಅದರಲ್ಲೂ ರಾಜ್ಯದಲ್ಲಿ ಆಸ್ತಿಗಳ ನೋಂದಣಿಯಿಂದ ಬರುವ ಮುದ್ರಾಂಕ ಶುಲ್ಕ, ಹೊಸ ವಾಹನಗಳ ನೋಂದಣಿ, ಮೋಟಾರು ತೆರಿಗೆ ಪಾವತಿ ಹಾಗೂ ಅಬಕಾರಿ ಇಲಾಖೆಯಿಂದ ಸಂಗ್ರಹಿಸಲಾಗುವ ರಾಜಸ್ವದಿಂದ ರಾಜ್ಯಕ್ಕೆ ವಾರ್ಷಿಕ 36 ಸಾವಿರ ಕೋಟಿ ರೂ.ಗೂ ಹೆಚ್ಚಿನ ಆದಾಯ ಬರುತ್ತದೆ.

ನಿರ್ಮಾಣ ಕ್ಷೇತ್ರಕ್ಕೆ ಹೊಡೆತ

ವಾರಾಂತ್ಯದ ದಿನಗಳನ್ನು ಹೊರತುಪಡಿಸಿ ಉಳಿದ 5 ದಿನ ರಾಜ್ಯದಲ್ಲಿ ನಿರ್ಮಾಣ ಕಾರ್ಯ ಹಾಗೂ ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿದ ವಸ್ತುಗಳ ಮಾರಾಟ ಮಾಡಬಹುದಾಗಿದೆ. ಆದರೆ, ಕರೊನಾ ಎರಡನೇ ಅಲೆ ಹಾಗೂ ಲಾಕ್​ಡೌನ್ ಮಾಡುವ ಭೀತಿಯಿಂದಾಗಿ ಕಾರ್ವಿುಕರು ತಮ್ಮ ಊರುಗಳಿಗೆ ವಾಪಸ್ ಹೊರಡುತ್ತಿದ್ದಾರೆ. ಇದು ನಿರ್ಮಾಣ ಕ್ಷೇತ್ರಕ್ಕೆ ಬರೆ ಎಳೆದಂತಾಗಿದೆ.

ಶೇ.7-8 ಮನೆಗಳಲ್ಲಿ ಜನರಿಲ್ಲ

ಬೆಂಗಳೂರಿನಲ್ಲಿ 19 ಲಕ್ಷ ಕಟ್ಟಡಗಳಿದ್ದು, ಈ ಪೈಕಿ 10 ಲಕ್ಷಕ್ಕೂ ಹೆಚ್ಚಿನವು ವಸತಿ ಕಟ್ಟಡಗಳಾಗಿವೆ. ಅವುಗಳಲ್ಲೀಗ ಶೇ. 7ರಿಂದ 8 ಮನೆಗಳು ಖಾಲಿಯಾಗಿವೆ. ಮುಂದಿನ ದಿನಗಳಲ್ಲಿ ಶೇ. 40 ಮನೆಗಳು ಖಾಲಿಯಾಗುವ ಸಾಧ್ಯತೆ ಇದೆ.

80 ಕೋಟಿ ಜನರಿಗೆ ಉಚಿತ ಪಡಿತರ

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ದೇಶದ 80 ಕೋಟಿ ಬಡವರಿಗೆ ಮೇ ಮತ್ತು ಜೂನ್​ನಲ್ಲಿ ತಲಾ 5 ಕೆಜಿ ಆಹಾರಧಾನ್ಯಗಳನ್ನು ಉಚಿತವಾಗಿ ವಿತರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರಕಟಿಸಿದ್ದಾರೆ. ಇದಕ್ಕಾಗಿ ಕೇಂದ್ರ ಸರ್ಕಾರ 26,000 ಕೋಟಿ ರೂ.ಗೂ ಹೆಚ್ಚು ಹಣವನ್ನು ಖರ್ಚು ಮಾಡಲಿದೆ. ದೇಶ ಕರೊನಾದ ಎರಡನೇ ಅಲೆ ಎದುರಿಸುತ್ತಿರುವ ಈ ಕಾಲಘಟ್ಟದಲ್ಲಿ ಜನರಿಗೆ ಪೌಷ್ಟಿಕ ಆಹಾರದ ಬೆಂಬಲ ಅಗತ್ಯ ಎಂದು ಮೋದಿ ಹೇಳಿದ್ದಾರೆ. ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ (ಎನ್​ಎಫ್​ಎಸ್​ಎ) ಫಲಾನುಭವಿಗಳಿಗೆ ಪಡಿತರ ವಿತರಿಸಲಾಗುವುದೆಂದು ಕೇಂದ್ರ ಸರ್ಕಾರ ಹೇಳಿದೆ. ಕುಟುಂಬದ ಪ್ರತಿಯೊಬ್ಬರಿಗೆ ಮಾಸಿಕ ತಲಾ 5 ಕೆಜಿ ಆಹಾರಧಾನ್ಯ ವಿತರಿಸಲು ಯೋಜಿಸಲಾಗಿದೆ.

ಕೋಟ್

ರಾಜ್ಯದಲ್ಲಿ ಕೈಗಾರಿಕೆಗಳ ಉತ್ಪಾದನೆಗೆ ಪೂರಕ ವಾತಾವರಣವಿದೆ. ಆದರೆ ಕಾರ್ವಿುಕರು ಊರುಗಳತ್ತ ತೆರಳುತ್ತಿ ದ್ದಾರೆ. ಅದರ ನಡುವೆಯೇ ವ್ಯಾಪಾರ, ವಹಿವಾಟು ಸ್ಥಗಿತಗೊಳಿಸಲಾಗಿದೆ. ಇದರಿಂದ ಕೈಗಾರಿಕೆಗಳು ಉತ್ಪಾದಿಸಿದರೂ ಅದನ್ನು ಖರೀದಿಸಿ, ಮಾರಾಟ ಮಾಡುವವರು ಇಲ್ಲದಂತಾಗಿದೆ. ಇದರಿಂದ ರಾಜ್ಯಕ್ಕೆ ಜಿಎಸ್​ಟಿ ಆದಾಯ 2 ಸಾವಿರ ಕೋಟಿ ರೂ. ಖೋತಾ ಆಗುವ ಸಾಧ್ಯತೆಯಿದೆ.

| ಪೆರಿಕಲ್ ಸುಂದರ್ ಎಫ್​ಕೆಸಿಸಿಐ ಅಧ್ಯಕ್ಷ