ಮಥುರಾ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾದ ನಂತರದಲ್ಲಿ ಕಾಶಿ ಮತ್ತು ಮಥುರಾದಲ್ಲಿ "ಸ್ವತಂತ್ರ"ಗೊಳಿಸುವ ಕೆಲಸ ನಮ್ಮ ಅಜೆಂಡಾದಲ್ಲಿದೆ ಎಂದು ಅಖಿಲ ಭಾರತೀಯ ಅಖಾಡ ಪರಿಷದ್(ಎಬಿಎಪಿ) ಹೇಳಿದೆ. ಎಬಿಎಪಿಯು ಸಂತರು ಮತ್ತು ಸ್ವಾಮೀಜಿಗಳ ಸಂಘಟನೆಯಾಗಿದ್ದು, ಅವರ ಹೇಳಿಕೆ ಈಗ ದೇಶದ ಗಮನಸೆಳೆದಿದೆ.
ಅಯೋಧ್ಯೆಯಲ್ಲಿ ಅದ್ದೂರಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಸಂಭ್ರಮದೊಂದಿಗೆ ಭೂಮಿ ಪೂಜೆ ನೆರವೇರಿದ್ದು ಸಂತಸ ಮತ್ತು ಹೆಮ್ಮೆಯ ವಿಚಾರ. ಸುದೀರ್ಘ ಅವಧಿಯ ಹೋರಾಟಕ್ಕೆ ಸಂದ ಜಯ ಅದು. ಈಗ ನಾವು ಕಾಶಿ ಮತ್ತು ಮಥುರಾದಲ್ಲೂ ಸನಾತನ ಧರ್ಮದ ಧ್ವಜ ಹಾರಾಡಬೇಕು ಎಂದು ಬಯಸುತ್ತೇವೆ. ಎಲ್ಲವೂ ಸಂವಿಧಾದನ ಚೌಕಟ್ಟಿನೊಳಗೇ ನೆರವೇರಬೇಕು. ಈ ನಿಟ್ಟಿನಲ್ಲಿ ಅಖಾಡ ಪ್ರಯತ್ನ ಆರಂಭಿಸಲಿದೆ ಎಂದು ಎಬಿಎಪಿಯ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಸುದ್ದಿಗಾರರಿಗೆ ತಿಳಿಸಿದರು.
ಹಿಂದುಗಳ ಪಾಲಿನ ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗಿರುವ ಕಾಶಿ ಮತ್ತು ಮಥುರಾಗಳನ್ನು ಮುಕ್ತಗೊಳಿಸುವ ಅಭಿಯಾನಕ್ಕೆ ಚಾಲನೆ ಕೊಡಲು ಸಂತರೆಲ್ಲರೂ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ಮಹಾಂತ ನರೇಂದ್ರ ಗಿರಿ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ 14 ರಾಜ್ಯಗಳ 80 ಸಂತರನ್ನು ಒಳಗೊಂಡ ಕೃಷ್ಣ ಜನ್ಮಭೂಮಿ ಟ್ರಸ್ಟ್ ರಚನೆಯಾಗಿದೆ. ಇದು ಕೃಷ್ಣ ಜನ್ಮಭೂಮಿ ಮುಕ್ತಗೊಳಿಸುವ ಪ್ರಯತ್ನದೊಂದಿಗೆ ಮುನ್ನಡೆಯಲಾರಂಭಿಸಿದೆ. (ಏಜೆನ್ಸೀಸ್)