ನ್ಯೂಸ್

ಹೋರಾಟಕ್ಕೆ ನಿಂತ ಕವೀಶ್ !: ಆಫ್ಟರ್​ ಆಪರೇಶನ್ ಲಂಡನ್ ಕೆಫೆ ಟೀಸರ್ ಬಿಡುಗಡೆ

ಬೆಂಗಳೂರು: ‘ನಾನು ನನ್ನ ಕನಸು’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಸಡಗರ ರಾಘವೇಂದ್ರ ಸ್ವತಂತ್ರವಾಗಿ ಮೊದಲ ಬಾರಿಗೆ ನಿರ್ದೇಶಿಸಿರುವ ಚಿತ್ರ ‘ಆಫ್ಟರ್​ ಆಪರೇಷನ್​ ಲಂಡನ್ ಕೆಫೆ’. ಕನ್ನಡ, ಮರಾಠಿ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರದಲ್ಲಿ ಕವೀಶ್ ಶೆಟ್ಟಿಗೆ ‘ಕೈವ’, ‘ದಿಲ್ ಪಸಂದ್’ ನಟಿ ಮೇಘಾ ಶೆಟ್ಟಿ ಜೋಡಿಯಾಗಿದ್ದಾರೆ. ಬಿ.ಸುರೇಶ್, ನೀನಾಸಂ ಅಶ್ವತ್ಥ್, ಅಶ್ವಿನಿ ಚಾವರೆ, ಶಿವಾನಿ ಸುರ್ವೆ, ಅರ್ಜುನ್ ಕಾಪಿಕಾಡ್, ವಿರಾಟ್ ಮಡಕೆ ತಾರಾ ಬಳಗದಲ್ಲಿದ್ದಾರೆ. ಇತ್ತೀಚೆಗೆಷ್ಟೇ ಚಿತ್ರದ ಟೀಸರ್ ಬಿಡುಗಡೆಗೊಳಿಸಲಾಯಿತು. ನಕ್ಸಲರ ಹೋರಾಟ, ಪೊಲೀಸರ ಕಾರ್ಯಾಚರಣೆ, ಬಂದೂಕಿನ ಸೌಂಡ್, ಕರಾವಳಿ ತೀರದಲ್ಲಿ ನಿಂತ ಹಡಗುಗಳು ಹೀಗೆ ನಾನಾ ಅಂಶಗಳನ್ನು ಟೀಸರ್‌ನಲ್ಲಿ ತೋರಿಸಲಾಗಿದೆ. ಸಡಗರ ರಾಘವೇಂದ್ರ, ‘ನಕ್ಸಲಿಸಂ ಹಿನ್ನೆಲೆಯ ಕಥೆಯಾಗಿದೆ. ಹಾಗಂತ ಅದನ್ನು ವೈಭವೀಕರಿಸಿಲ್ಲ. ಯಾರೋ ಒಬ್ಬರ ಕುರಿತಾಗಿಯೂ ಇಲ್ಲ. ‘ಆಫ್ಟರ್ ಆಪರೇಷನ್ ಲಂಡನ್ ಕೆಫೆ’ ಸೀಕ್ವೆಲ್ ಆಗಿದ್ದು, ಮೊದಲ ಭಾಗ ಪ್ರೀಕ್ವೆಲ್ ಆನಂತರ ಬರಲಿದೆ’ ಎಂದರು. ಮೇಘಾ ಶೆಟ್ಟಿ, ‘ನಾನು ಮರಾಠಿ ಕಲಿತು ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಸಡಗರ ರಾಘವೇಂದ್ರ ಮೊದಲ ನಿರ್ದೇಶನದಲ್ಲೇ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಒಳ್ಳೆಯ ತಂಡದ ಜತೆಗೆ ಕೆಲಸ ಮಾಡಿರುವ ಖುಷಿಯಿದೆ’ ಎಂದರು. ಎನ್.ಡಿ.ನಾಗಾರ್ಜುನ್ ಛಾಯಾಗ್ರಹಣ, ಮಾಸ್ ಮಾದ ಸಾಹಸ ನಿರ್ದೇಶನ, ಪ್ರನ್ಶು ಝಾ ಸಂಗೀತ, ಕೆ.ಎಂ.ಪ್ರಕಾಶ್ ಸಂಕಲನ ಚಿತ್ರಕ್ಕಿದೆ.