ಮುಂಬೈ: ಭಾರತದ ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಜತೆಗಿನ ದಾಂಪತ್ಯ ಸಂಬಂಧಕ್ಕೆ ಅಧಿಕೃತವಾಗಿ ವಿಚ್ಛೇದನ ಘೋಷಿಸುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದು, ಈ ವಿಚಾರ ಇತ್ತೀಚೆಗಷ್ಟೇ ಮಲಿಕ್ ದಿಢೀರನೇ ಪಾಕ್ ನಟಿ ಸನಾ ಜಾವೇದ್ ಜತೆ ವಿವಾಹವಾದ ಫೋಟೋಸ್ ವೈರಲ್ ಆದ ಬೆನ್ನಲ್ಲೇ ಮುನ್ನೆಲೆಗೆ ಬಂದಿತು.
ಕಳೆದ ಹಲವು ತಿಂಗಳುಗಳಿಂದ ಸಾನಿಯಾ ಮತ್ತು ಮಲಿಕ್ ದಾಂಪತ್ಯ ಕುರಿತು ಅನೇಕ ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿತ್ತು. ವದಂತಿಗಳ ಬೆನ್ನಲ್ಲೇ ಸನಾ ಜತೆ ಮಲಿಕ್ ಮದುವೆಯಾದ ಸಂಗತಿ ಹೊರಬಿದ್ದಿದ್ದು, ಸಾನಿಯಾ ಅಭಿಮಾನಿಗಳನ್ನು ಅಚ್ಚರಿಗೊಳಿಸಿತು. ಸನಾ ಜಾವೇದ್ಗೆ ಇದು ಎರಡನೇ ವಿವಾಹವಾದರೆ, ಮಲಿಕ್ಗೆ ಇದು ಮೂರನೇ ಮದುವೆ ಎಂಬುದು ಮತ್ತೊಂದು ಶಾಕಿಂಗ್ ವಿಚಾರ.
ಈ ಸುದ್ದಿ ಬಹಿರಂಗವಾದ ನಂತರ ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಒಳ್ಳೆಯ ನಿರ್ಧಾರ ತೆಗದುಕೊಂಡಿದ್ದೀರಿ, ಧೃತಿಗೆಡಬೇಡಿ ಎಂದು ಸಾನಿಯಾಗೆ ಧೈರ್ಯ ತುಂಬಿದ್ದಾರೆ. ವಿಚ್ಛೇದನದ ಬಳಿಕ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮೊದಲ ಫೋಟೋ ಹಂಚಿಕೊಂಡ ಸಾನಿಯಾ, ಕನ್ನಡಿ ಮುಂದೆ ನಿಂತು ತಮ್ಮ ಮುಖವನ್ನು ನೋಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಕಪ್ಪು ಮತ್ತು ಬೂದಿ ಬಣ್ಣದ ಉಡುಗೆಯಲ್ಲಿ ಕನ್ನಡಿ ಮುಂದೆ ನಿಂತ ಸಾನಿಯಾ, ಫೋಟೋಗೆ 'ಪ್ರತಿಬಿಂಬ' ಎಂಬ ಪದವನ್ನು ಶೀರ್ಷಿಕೆಯಾಗಿ ನೀಡಿದ್ದಾರೆ. ಮಿರ್ಜಾ ಫೋಟೋಗೆ ಧೈರ್ಯ ತುಂಬುವಂತ ಕಮೆಂಟ್ಗಳನ್ನು ಮಾಡುತ್ತಿರುವ ನೆಟ್ಟಿಗರು, ನಿಮ್ಮ ನಿರ್ಧಾರಕ್ಕೆ ಒಂದು ಮೆಚ್ಚುಗೆ ಎಂದು ತಿಳಿಸುತ್ತಿದ್ದಾರೆ,(ಏಜೆನ್ಸೀಸ್).