ನ್ಯೂಸ್

ಖಡಕ್ ಪ್ರಿಯಾ !: ‘ಭೀಮ’ ಬಳಿಕ ಮುಂದಿನ ಎರಡು ಚಿತ್ರಗಳಲ್ಲಿ ಪೊಲೀಸ್ ಅಧಿಕಾರಿಯಾದ ನಟಿ

ಬೆಂಗಳೂರು: ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಪ್ರಿಯಾ ಶಠಮರ್ಷಣ ಬಳಿಕ ಕನ್ನಡದ ‘ರಾಮಾ ರಾಮಾ ರೇ’, ‘ಚೇಸ್ ಇನ್ ದ ಡಾರ್ಕ್’, ‘19.20.21’ ಚಿತ್ರದಲ್ಲಿ ನಟಿಸಿದ್ದರಾದರೂ ಹೆಚ್ಚು ಜನಪ್ರಿಯರಾಗಿದ್ದು ಮಾತ್ರ ‘ಭೀಮ’ ಮೂಲಕ. ಪೊಲೀಸ್ ಅಧಿಕಾರಿ ಗಿರಿಜಾ ಪಾತ್ರದಲ್ಲಿ ಮಿಂಚಿದ್ದ ಅವರ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಈ ಬೆನ್ನೆಲ್ಲೆ ಸಾಕಷ್ಟು ಆಫರ್‌ಗಳು ಬರುತ್ತಿವೆಯಂತೆ. ಮುಂದಿನ ಎರಡು ಚಿತ್ರಗಳಲ್ಲಿ ಪ್ರಿಯಾ, ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘‘ಭೀಮ’ ಸಕ್ಸಸ್ ಬಳಿಕ ನಾನು ಎರಡು ಚಿತ್ರಗಳಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇದು ನನಗೆ ಕಾಂಪ್ಲಿಮೆಂಟ್ ಹಾಗೂ ಕಂಪ್ಲೇಟ್ ಹೌದು. ಅಂಗಂಥ ಹೇಳಿ, ನಾನು ವಿಭಿನ್ನ ಪಾತ್ರಗಳನ್ನು ಮಾಡಿಲ್ಲವಂತಲ್ಲ. ಈ ಹಿಂದೆ ‘ಜೀನಿಯಸ್ ಮುತ್ತ’ದಲ್ಲಿ ನೀಲವ್ವ ಪಾತ್ರ ಗಮನಸೆಳೆದಿತ್ತು. ಬಿಡುಗಡೆಗೆ ಸಿದ್ಧವಾಗಿರುವ ‘ಚುರ್ಮುರಿ’ಯಲ್ಲಿ ಕೂಲಿ ಕೆಲಸ ಮಾಡುವ ಮಹಿಳೆಯಾಗಿದ್ದೇನೆ. ಇದು ಗಟ್ಟಿ ಪಾತ್ರ. ಒಂದೇ ಪಾತ್ರಕ್ಕೆ ಸೀಮಿತವಾಗುವುದಕ್ಕಿಂತ ವಿಭಿನ್ನ ಪಾತ್ರ ಮಾಡುವ ಅಭಿಲಾಷೆ ನನಗೂ ಇದೆ. ಆದರೆ, ಸದ್ಯಕ್ಕೆ ಖಡಕ್ ಪಾತ್ರಗಳೇ ಬರುತ್ತಿವೆ. ವಿಭಿನ್ನ ಪಾತ್ರಗಳು ಬಂದರೆ ಮೊದಲ ಆದ್ಯತೆ ನೀಡುವೆ’ ಎನ್ನುತ್ತಾರೆ ಪ್ರಿಯಾ.

ಗಿರಿಜಾ ಈಗ ದುರ್ಗಾ: ಪ್ರಿಯಾ ನಟಿಸಿರುವ ‘ಕಸ್ಟಡಿ’ ಈಗಾಗಲೇ ಶೂಟಿಂಗ್ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಇತ್ತೀಚೆಗೆ ಟೊರಿನಾ ಫ್ಯಾಕ್ಟರಿಯಲ್ಲಿ ಸಾಹಸ ದೃಶ್ಯದ ಚಿತ್ರೀಕರಣ ಮಾಡಲಾಯಿತು.‘‘ಕಸ್ಟಡಿ’ ಸೈಬರ್ ಕ್ರೈಂ ಸಂಬಂಧಿಸಿದ ಕಥೆ. ನಮ್ಮ ಸುತ್ತಮುತ್ತ ನಡೆಯುವ ಸಣ್ಣ ಸಣ್ಣ ಅಪರಾಧಗಳೇ ಸರಣಿ ಕೊಲೆಗಳಿಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ತಿಳಿಸುತ್ತದೆ. ಇಲ್ಲಿ ನಾನು ದುರ್ಗಾಪರಮೇಶ್ವರಿ ಎಂಬ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಮೊದಲಿಗೆ ಪಾತ್ರದ ಬಗ್ಗೆ ಹೇಳಿದಾಗ ಮತ್ತೇ ಪೊಲೀಸ್ ಪಾತ್ರ ಎಂದುಕೊಂಡಿದ್ದೆ. ಆದರೆ, ಕಥೆ ಕೇಳಿದಾಗ ಬಳಿಕ ನಾನೇ ಒಪ್ಪಿಕೊಂಡೆ. ಅಷ್ಟು ಗಟ್ಟಿಯಾಗಿದೆ. ದುರ್ಗಾ ಪಾತ್ರದಲ್ಲಿ ಹಲವು ಶೇಡ್‌ಗಳಿವೆ. ಪೊಲೀಸ್ ಅಧಿಕಾರಿ, ಅಕ್ಕ, ಅಮ್ಮ ಹಾಗೂ ನ್ಯಾಯಕ್ಕಾಗಿ ಹಂಬಲಿಸುವವಳಾಗಿದ್ದಾಳೆ’ ಎನ್ನುತ್ತಾರೆ ಪ್ರಿಯಾ.

ಮುಂದಿನ ಸಿನಿಮಾಗಳು: ಪ್ರಿಯಾ ಅವರ ಮತ್ತೊಂದು ಸಿನಿಮಾ ನವೆಂಬರ್‌ನಲ್ಲಿ ಸೆಟ್ಟೇರಲಿದೆ. ಅದರಲ್ಲೂ ಕೂಡ ಪೊಲೀಸ್ ಅಧಿಕಾರಿಯಾಗಿದ್ದಾರೆ. ಇದು ನೈಜ ಘಟನೆ ಆಧಾರಿತ ಚಿತ್ರವಾಗಿದ್ದು, ಬಹು ನಿರೀಕ್ಷೆ ಇದೆ ಅಂತೆ. ಅವರ ‘ಗಾಂಧಿ ಸ್ಕ್ವೇರ್’, ‘ಚುರ್ಮುರಿ’ ಬಿಡುಗಡೆಗೆ ಸಿದ್ಧತೆ ನಡೆಸಿವೆ. ‘ಚುರ್ಮುರಿ’ ರಾಷ್ಟ್ರೀಯ, ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‌ನಲ್ಲಿ ಭಾಗವಹಿಸಲು ಯೋಜಿಸಿದೆ. ತುಂಬಾ ಸ್ಕ್ರಿಪ್ಟ್ ಕೇಳುತ್ತಿರುವ ಪ್ರಿಯಾ, ಪಾತ್ರ ಆಯ್ಕೆಯಲ್ಲಿ ಚ್ಯುಸಿಯಾಗಿದ್ದಾರೆ.

ಮಾಲಾಶ್ರೀ, ವಿಜಯಶಾಂತಿ ಸ್ಫೂರ್ತಿ: ಪೊಲೀಸ್ ಪಾತ್ರಕ್ಕೆ ಒಪ್ಪುವ ಪ್ರಿಯಾಗೆ ಕನ್ನಡದ ಮಾಲಾಶ್ರೀ, ವಿಜಯಶಾಂತಿ ಸ್ಫೂರ್ತಿ ಅಂತೆ. ಈ ಬಗ್ಗೆ ‘ನನಗೆ ಪೊಲೀಸ್ ಪಾತ್ರ ಮಾಡಲು ಮಾಲಾಶ್ರೀ, ವಿಜಯಶಾಂತಿ ಅವರೇ ಸ್ಫೂರ್ತಿ. ಇನ್ನು ನನ್ನ ಆಪ್ತ ಸ್ನೇಹಿತೆ ಮಧುರಾ ವೀಣಾ, ಸಂಬಂಧಿ ಮಹೇಶ್ ಇಬ್ಬರು ಪೊಲೀಸ್ ಅಧಿಕಾರಿಯಾಗಿದ್ದು, ಇವರಿಂದ ಸಾಕಷ್ಟು ಕಲಿತಿದ್ದೇನೆ. ಸಮಾಜಕ್ಕಾಗಿ ಹಗಲಿರುಳು ದುಡಿಯುವ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಅಧಿಕಾರಿಯಾಗಲು ಮಹಿಳೆಯರು ಇನ್ನಷ್ಟು ಮುಂದೆ ಬರಬೇಕು’ ಎಂಬುದು ಪ್ರಿಯಾ ಅಭಿಪ್ರಾಯ.