ನ್ಯೂಸ್

ಟ್ವಿಟ್ಟರ್​ ಬ್ಯಾನ್​ ಮಾಡಿ, ಬೆಂಗಳೂರಿನ ಕೂ ಬಳಸಲಾರಂಭಿಸಿದ ನೈಜೀರಿಯಾ!

ಅಬುಜಾ: ಅಮೆರಿಕ ಮೂಲದ ಟ್ವಿಟ್ಟರ್ ಇದೀಗ ಹಲವು ರಾಷ್ಟ್ರಗಳೊಂದಿಗೆ ವಾದ ವಿವಾದಗಳನ್ನು ಮಾಡಿಕೊಳ್ಳುತ್ತಿದೆ. ನೈಜೀರಿಯಾದ ಅಧ್ಯಕ್ಷ ಮುಹಮ್ಮದು ಬುಹಾರಿ ಅವರ ಟ್ವೀಟ್​ ಅನ್ನೇ ಡಿಲೀಟ್​ ಮಾಡಿದ ನಂತರ ಸಿಟ್ಟಿಗೆದ್ದ ರಾಷ್ಟ್ರ ತಮ್ಮ ದೇಶದಲ್ಲಿ ಟ್ವಿಟ್ಟರ್​ನ್ನೇ ಬ್ಯಾನ್ ಮಾಡಿತ್ತು. ಇದೀಗ ಆ ರಾಷ್ಟ್ರದಲ್ಲಿ ಟ್ವಿಟ್ಟರ್​ ಬದಲು ಬೆಂಗಳೂರಿನ ಕೂ ಬಳಕೆ ಆರಂಭವಾಗಿದೆ.

ಹೌದು. ನೈಜೀರಿಯಾದಲ್ಲಿ ಕಳೆದ ವಾರವೇ ಟ್ವಿಟ್ಟರ್​ನ್ನು ಬ್ಯಾನ್​ ಮಾಡಲಾಗಿದೆ. ದೇಶದಲ್ಲಿ ಕಚೇರಿ ಆರಂಭಿಸಿ, ಅಲ್ಲಿನ ನಿಯಮಗಳಿಗೆ ಒಪ್ಪಿಕೋಮಡು ನಡೆಯುವುದಾದರೆ ಮಾತ್ರವೇ ಟ್ವಿಟ್ಟರ್​ಗೆ ಸ್ಥಾನ ಕೊಡಲಾಗುವುದು ಎಂದು ಹೇಳಲಾಗಿದೆ. ಇದೀಗ ಅದರ ಬೆನ್ನಲ್ಲೇ ನೈಜೀರಿಯಾ ಕೂ ಆ್ಯಪ್​ನಲ್ಲಿ ಖಾತೆ ತೆರೆದಿದೆ. ಟ್ವಿಟ್ಟರ್​ನ ರೀತಿಯಲ್ಲೇ ಬಳಕೆಯಾಗುವ ಕೂಗೆ ಜೈ ಎಂದಿದೆ.

ಈ ವಿಚಾರವನ್ನು ಸ್ವತಃ ಕೂ ಸಂಸ್ಥೆಯ ಸಹ ಸಂಸ್ಥಾಪಕ ಆರ್​ ಅಪ್ರಮೇಯ ತಿಳಿಸಿದ್ದಾರೆ. ಕೂ ಆ್ಯಪ್​ನ್ನು ಬೆಂಗಳೂರಿನ ಜಯಗರದಲ್ಲಿರುವ ವೋಕಲ್ (ಬಾಂಬಿನೇಟ್ ಟೆಕ್ನಾಲಜೀಸ್) ಸಂಸ್ಥೆ ತಯಾರಿಸಿದೆ. ಟ್ವಿಟ್ಟರ್​ನ ಕೆಲ ಲೋಪದೋಷಗಳು ಕಾಣಿಸಿಕೊಳ್ಳುತ್ತಿದ್ದಂತೆಯೇ ಕೂ ಆ್ಯಪ್​ಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಬಾಲಿವುಡ್​ ನಟಿ ಕಂಗನಾ ರಣಾವತ್​ ಇಂದ ಹಿಡಿದು ಅನೇಕ ಸೆಲೆಬ್ರಿಟಿಗಳೂ ಈ ಆ್ಯಪ್​ ಬಳಕೆ ಮಾಡಲಾರಂಭಿಸಿದ್ದಾರೆ. ಭಾರತ ಮತ್ತು ಟ್ವಿಟ್ಟರ್​ ಸಂಸ್ಥೆಯ ನಡುವೆಯೂ ಕೆಲ ಭಿನ್ನಾಭಿಪ್ರಾಯಗಳು ಇರುವುದರಿಂದಾಗಿ ಕೂ ಗೆ ಹೆಚ್ಚಿನ ಮನ್ನಣೆ ಸಿಗುವಂತಾಗಿದೆ. (ಏಜೆನ್ಸೀಸ್)