ನೈರೋಬಿ: ಬಹುದೊಡ್ಡ ದಂತಗಳನ್ನು ಹೊಂದಿದ್ದ ಆಫ್ರಿಕಾದ ಕೊನೆಯ ಆನೆ ಮಂಗಳವಾರ 50 ವಯಸ್ಸಿನಲ್ಲಿ ಮೃತಪಟ್ಟಿರುವುದಾಗಿ ಕೀನ್ಯಾ ವನ್ಯಜೀವಿ ಸೇವಾ ಇಲಾಖೆಯು ತಿಳಿಸಿದೆ.
ಆನೆಯು ಟಿಮ್ ಎಂದೇ ಪರಿಚಿತವಾಗಿತ್ತು. ಬಿಗ್ ಟಿಮ್ ಎಂತಲೂ ಕರೆಯಲಾಗುತ್ತಿತ್ತು. ಕೀನ್ಯಾದ ಮಡಾ ಏರಿಯಾದಲ್ಲಿರುವ ಅಂಬೊಸೆಲಿ ರಾಷ್ಟ್ರೀಯ ಉದ್ಯಾನವನದಲ್ಲಿ ಸಾವಿಗೀಡಾಗಿದೆ.
ದಕ್ಷಿಣ ಕೀನ್ಯಾ ವ್ಯಾಪ್ತಿಯ ಅರಣ್ಯದಲ್ಲಿ ಈ ಬಿಗ್ ಟಿಮ್ ಏಕಾಂಗಿಯಾಗಿ ಸಂಚರಿಸುತ್ತಿತ್ತು. ಅಂಬೊಸೆಲಿ ರಾಷ್ಟ್ರೀಯ ಉದ್ಯಾನವನದ ಹಿರಿಯಣ್ಣನಾಗಿದ್ದ ಬಿಗ್ ಟಿಮ್ ತಲೆಗೆ ಕೆಲವು ವರ್ಷಗಳ ಹಿಂದೆ ದೊಡ್ಡ ಗಾತ್ರದ ಬಂಡೆ ಬಡಿದಿತ್ತು. ಚೂಪಾದ ಬಂಡೆಯು ಕಿವಿಯ ಮೂಲಕ ದೇಹವನ್ನು ಸೀಳಿ ಬಂಡೆಯ ಒಂದು ತುದಿ ಆನೆಯ ತೋಳಿನಲ್ಲಿಯೇ ಬಲವಾಗಿ ಉಳಿದುಕೊಂಡಿತ್ತು.
ಅಂದಿನಿಂದ ಗಂಭೀರ ಗಾಯಕ್ಕೆ ತುತ್ತಾಗಿದ್ದ ಬಿಗ್ ಟಿಮ್ಗೆ ನಿರಂತರವಾಗಿ ಚಿಕಿತ್ಸೆ ನೀಡಿಕೊಂಡು ಬರಲಾಗಿತ್ತು. ಬಳಿಕ ಅದನ್ನು ಅಂಬೊಸೆಲಿಯ ಮಾರ್ಸ್ಲ್ಯಾಂಡ್ಗೆ ಬಿಡಲಾಗಿತ್ತು. ಇದೀಗ ಬಿಗ್ ಟಿಮ್ ಸಾವಿಗೀಡಾಗಿದ್ದು ಆಫ್ರಿಕಾ ಇತಿಹಾಸ ಪುಟವನ್ನು ಸೇರಿಕೊಂಡಿದೆ.
ಸದ್ಯ ಬಿಗ್ ಟಿಮ್ ಕಳೇಬರವನ್ನು ರಾಜಧಾನಿ ನೈರೋಬಿಯಲ್ಲಿರುವ ಕೀನ್ಯಾದ ರಾಷ್ಟ್ರೀಯ ಮ್ಯೂಸಿಯಂಗೆ ತರಲಾಗಿದ್ದು, ಟಾಕ್ಸಿಡರ್ಮಿಸ್ಟ್ ದೇಹವನ್ನು ಶಿಕ್ಷಣ ಮತ್ತು ಪ್ರದರ್ಶನ ಉದ್ದೇಶಕ್ಕಾಗಿ ಸಂರಕ್ಷಿಸಿಡಲು ತಯಾರಿ ನಡೆಸುತ್ತಿದ್ದಾರೆ.
ಪರೋಪಕಾರಿಯಾದ್ದ ಬಿಗ್ ಟೀಮ್ ಅಂಬೊಸೆಲಿ ರಾಷ್ಟ್ರೀಯ ಉದ್ಯಾನವನದಲ್ಲಿ ಶಾಂತಿಯ ಸಂಕೇತವಾಗಿದ್ದ. ಕೀನ್ಯಾ ಜನರ ಪ್ರೀತಿ ಪಾತ್ರನಾಗಿದ್ದ ಎಂದು ಕೀನ್ಯಾ ವನ್ಯಜೀವಿ ಇಲಾಖೆ ಸಂತಾಪ ಸೂಚಿಸಿದೆ. ಅಲ್ಲದೆ, ಆನೆಗಳನ್ನು ರಕ್ಷಿಸಿ ಎಂದೂ ಮನವಿ ಮಾಡಿಕೊಂಡಿದೆ. (ಏಜೆನ್ಸೀಸ್)