ನ್ಯೂಸ್

VIDEO| ಮಣ್ಣಿನಡಿಯಲ್ಲೇ ಹೊಂಚು ಹಾಕಿ ಬೇಟೆಯಾಡುವ ಆಫ್ರಿಕನ್​​ ಸ್ಪೈಡರ್​: ರೋಚಕ ವಿಡಿಯೋ ವೈರಲ್​!

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಭಾರತೀಯ ಅರಣ್ಯಾಧಿಕಾರಿ ಸುಶಾಂತ್​ ನಂದಾ ಅವರು ಆಗಾಗ ಜೀವ ಸಂಕುಲದ ಅದ್ಭುತ ಫೋಟೋ ಅಥವಾ ವಿಡಿಯೋಗಳನ್ನು ಹರಿಬಿಡುತ್ತಿರುತ್ತಾರೆ.

ಅದೇ ರೀತಿಯಾಗಿ ಇಂದು ಕೂಡ ತಮ್ಮ ಟ್ವಿಟರ್​ ಬತ್ತಳಿಕೆಗೆ ಮತ್ತೊಂದು ವಿಡಿಯೋ ಶೇರ್​ ಮಾಡಿಕೊಂಡಿದ್ದು, ಎಂದಿನಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲಿ ಏನಿದೆ?: ಕೇವಲ 11 ಸೆಕೆಂಡಿನ ವಿಡಿಯೋದಲ್ಲಿ ನೆಲದ ಮೇಲೆ ಹರಿದಾಡುವ ಬಿಳಿ ಬಣ್ಣದ ಕೀಟವನ್ನು ಮಣ್ಣಿನಡಿಯಿಂದಲೇ ಅಪರೂಪದ ಎಂಟು ಕಾಲಿನ ಆಫ್ರಿಕನ್ ರೆಡ್​ ಟ್ರ್ಯಾಪ್​ಡೋರ್​ ಜೇಡ ಹೊಂಚು ಹಾಕಿ ಬೇಟೆಯಾಡುವ ಅದ್ಭುತ ದೃಶ್ಯವಿದೆ.

ಅಂದಹಾಗೇ ಈ ವಿಡಿಯೋವನ್ನು ಮೊದಲ ಲ್ಯಾಟ್​ ಬೈಬಲ್​(LADbible) ಎಂಬ ಫೇಸ್​ಬುಕ್​ ಪೇಜ್​ನಲ್ಲಿ ಅಪ್​ಲೋಡ್​ ಮಾಡಲಾಗಿದೆ. ಈ ವಿಡಿಯೋವನ್ನು ಅಮೆರಿಕದಲ್ಲಿ ಚಿತ್ರೀಕರಿಸಲಾಗಿದೆ. ಇದನ್ನು ಅಮೆರಿಕದ ನ್ಯಾಶ್​ವಿಲ್ಲೆ ನಿವಾಸಿ ಆ್ಯಂಡ್ರಿಯಾ ವ್ಯಾನ್​ ವೆಗ್ಗೆಲ್​ ಎಂಬುವರು ಚಿತ್ರೀಕರಿಸಿದ್ದಾರೆ. ಈಗಾಗಲೇ ಈ ವಿಡಿಯೋವನ್ನು 2 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ.

ಅಂದಹಾಗೆ ಆಫ್ರಿಕನ್ ರೆಡ್​ ಟ್ರ್ಯಾಪ್​ಡೋರ್​ ಭೂಮಿಯ ಒಳಗಡೆಯೇ ಬಲೆಯನ್ನು ನಿರ್ಮಿಸುತ್ತವೆ. ತನ್ನ ಜೀವಾತವಧಿಯಲ್ಲಿ ಹೆಚ್ಚು ಕಾಲ ಮಣ್ಣಿನಡಿಯಲ್ಲೇ ವಾಸಿಸುತ್ತವೆ. ಕೀಟ ಮತ್ತು ಹಾವು, ಇಲಿ ಹಾಗೂ ಪಕ್ಷಿಗಳ ಮರಿಗಳನ್ನು ತಿಂದು ಬದುಕುತ್ತವೆ. (ಏಜೆನ್ಸೀಸ್​)