ನ್ಯೂಸ್

ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್​ ಘನಿಯವರ ಸಂಬಂಧಿಯ ಹತ್ಯೆ; ಕಾಬೂಲ್​​ನಲ್ಲಿ ಕಟ್ಟೆಚ್ಚರ

ಕಾಬೂಲ್​: ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್​ ಘನಿ ಅವರ ಹತ್ತಿರದ ಸಂಬಂಧಿಯೋರ್ವರನ್ನು ಇಂದು ಗುಂಡು ಹಾರಿಸಿ ಹತ್ಯೆಗೈಯಲಾಗಿದೆ.

ಕಾಬೂಲ್​ನಲ್ಲಿರುವ ಅವರ ಮನೆಯಲ್ಲಿ ಘನಿ ಮೃತದೇಹ ಪತ್ತೆಯಾಗಿದೆ. ಮೈಮೇಲೆ ಗುಂಡು ಹೊಕ್ಕ ಗಾಯಗಳೂ ಉಂಟಾಗಿವೆ ಎಂದು ಕಾಬೂಲ್​ ಪೊಲೀಸರು ತಿಳಿಸಿದ್ದಾರೆ ಎಂದು ಆಫ್ಘಾನ್​ ಮಾಧ್ಯಮಗಳು ವರದಿ ಮಾಡಿವೆ.

ಇದು ತಾಲಿಬಾನ್​ ಉಗ್ರರ ಕೈವಾಡ ಇರಬಹುದಾ ಎಂಬ ಅನುಮಾನವೂ ಕಾಡುತ್ತಿದೆ. ಈ ಬಾರಿಯ ಫೆಬ್ರವರಿಯಲ್ಲಿ ಅಮೆರಿಕ ಮತ್ತು ಅಫ್ಘಾನಿಸ್ತಾನ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಒಪ್ಪಂದದ ಮೂಲಕ ಎರಡು ದಶಕಗಳ ಸಮರಕ್ಕೆ ತೆರೆ ಎಳೆಯಲಾಗಿತ್ತು. ಒಪ್ಪಂದದ ನಿಯಮದಂತೆ ಅಫ್ಘಾನ್​ ನೆಲದಲ್ಲಿ ತಾಲಿಬಾನ್​ ಉಗ್ರರ ತರಬೇತಿಗೆ ಅವಕಾಶ ನೀಡುವುದಿಲ್ಲ ಎಂದು ಅಫ್ಘಾನಿಸ್ತಾನ ಸರ್ಕಾರ ಹೇಳಿತ್ತು. ಆದರೆ ಅಮೆರಿಕ-ಅಫ್ಘಾನಿಸ್ತಾನ ನಡುವೆ ಈ ಒಪ್ಪಂದ ಆಗುತ್ತಿದ್ದಂತೆ ತಾಲಿಬಾನ್​ ಉಗ್ರರಿಂದ ಬೆದರಿಕೆ ಶುರುವಾಗಿತ್ತು. ಅಲ್ಲದೆ ದಾಳಿಯನ್ನೂ ಮಾಡಿತು. ದೇಶದ ಮಿಲಿಟರಿ ಪಡೆಗಳ ಮೇಲೆಯೂ ಆಕ್ರಮಣ ಮಾಡುವುದಾಗಿ ಘೋಷಿಸಿತ್ತು.

ಇದೀಗ ಅಧ್ಯಕ್ಷರ ಹತ್ತಿರದ ಸಂಬಂಧಿ ಗುಂಡೇಟಿಗೆ ಬಲಿಯಾಗಿದ್ದು, ಆಫ್ಘಾನ್​​ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ತಿಳಿಸಿವೆ. (ಏಜೆನ್ಸೀಸ್​)