ಕಾಬೂಲ್: ಕಳೆದ ಹಲವು ದಿನಗಳಿಂದ ಆಫ್ಘಾನಿಸ್ತಾನದಲ್ಲಿ ರಕ್ತಬಿಜಾಸುರರಂತೆ ಆಡಿ ಇಡೀ ದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುವ ತಾಲಿಬಾನ್ ಉಗ್ರರು ಈಗ ಎಂಜಾಯ್ ಮೂಡ್ನಲ್ಲಿದ್ದಾರೆ. ಪಾರ್ಕ್ನಲ್ಲಿ ಮಂಗನಾಟ ಆಡಿದ್ದ ತಾಲಿಬಾನಿಗಳು, ಈಗ ಜಿಮ್ನಲ್ಲಿ ಬೆವರಿಳಿಸುತ್ತಿರುವ ವಿಡಿಯೋ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ.
ಒಂದೆಡೆ ಅಫ್ಘಾನ್ ಪ್ರಜೆಗಳು ಜೀವವನ್ನೇ ಪಣಕ್ಕಿಟ್ಟು ದೇಶ ತೊರೆಯುತ್ತಿದ್ದರೆ, ಇತ್ತ ಗೆಲುವಿನ ಬಳಿಕ ತಾಲಿಬಾನಿಗಳು ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ. ಇದಕ್ಕೂ ಮುಂಚೆ ಅಮ್ಯೂಸ್ಮೆಂಟ್ ಪಾರ್ಕ್ಗೆ ತೆರಳಿದ ತಾಲಿಬಾನಿಗಳು ಅಲ್ಲಿ ಆಟಿಕೆಗಳ ಮೇಲೆ ಮಂಗನಾಟ ಆಡಿರುವ ವಿಡಿಯೋ ವೈರಲ್ ಆಗಿತ್ತು.
ಅಫ್ಘಾನಿಸ್ತಾನವನ್ನು ಸಂಪೂರ್ಣ ವಶಪಡಿಸಿಕೊಂಡ ನಂತರ ತಾಲಿಬಾನ್ಗಳ ಹುಚ್ಚಾಟ ಮುಂದುವರೆದಿದೆ. ಚಿತ್ರ ವಿಚಿತ್ರವಾಗಿ ವರ್ತಿಸುತ್ತಿರುವ ತಾಲಿಬಾನ್ಗಳು ಇದೀಗ ತಮ್ಮ ಆಡಳಿತವನ್ನು ಶುರು ಮಾಡಿದ್ದಾರೆ.
ಒಂದೆಡೆ ಗನ್ ಹಿಡಿದುಕೊಂಡು ಟ್ರಾಫಿಕ್ ಕಂಟ್ರೋಲ್ ಮಾಡುತ್ತಾ ಟ್ರಾಫಿಕ್ ಪೊಲೀಸ್ ಆಗಿದ್ದರೆ, ಇನ್ನೊಂದೆಡೆ ಕೈಯಲ್ಲಿ ಮೈಕ್ ಹಿಡಿದು ಜರ್ನಲಿಸ್ಟ್ ಆಗಿರುವ ತಾಲಿಬಾನಿಗಳು, ಇಂದಿನ ಪರಿಸ್ಥಿತಿಯ ಬಗ್ಗೆ ಜನಸಾಮಾನ್ಯರಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.