ನ್ಯೂಸ್

ಅಪ್ಪ-ಅಮ್ಮನನ್ನು ಕಣ್ಣೆದುರೇ ಹತ್ಯೆ ಮಾಡಿದ ಉಗ್ರರನ್ನು ಗುಂಡು ಹೊಡೆದು ಕೊಂದ ಬಾಲಕಿ; ಸಂಕಟದ ಮಧ್ಯೆ ಶೌರ್ಯ

ಘಜನಿ: ತನ್ನ ಕಣ್ಣೆದುರೇ ಅಪ್ಪ-ಅಮ್ಮನನ್ನು ಕೊಂದ ತಾಲಿಬಾನಿ ಉಗ್ರರನ್ನು ಬಾಲಕಿಯೋರ್ವಳು ಗುಂಡು ಹೊಡೆದು ಕೊಂದು, ಧೈರ್ಯ ಮೆರೆದಿದ್ದಾಳೆ.

ಈ ಶಾಲಾ ಬಾಲಕಿಯ ಗುಂಡೇಟಿಗೆ ಇಬ್ಬರು ತಾಲಿಬಾನಿ ಭಯೋತ್ಪಾದಕರು ಬಲಿಯಾಗಿದ್ದು, ಇನ್ನೂ ಹಲವರು ಗಾಯಗೊಂಡಿದ್ದಾರೆ.

ಬಾಲಕಿಯ ತಂದೆ ಸರ್ಕಾರದ ಬೆಂಬಲಿಗರಾಗಿದ್ದು, ಪ್ರಮುಖ ಸ್ಥಾನದಲ್ಲಿ ಇದ್ದವರು. ಇದೇ ಕಾರಣಕ್ಕೆ ತಾಲಿಬಾನ್​ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದರು ಎಂದು ವರದಿಯಾಗಿದೆ.

ಘೋರ್​ನ ಕೇಂದ್ರೀಯ ಪ್ರಾಂತ್ಯದಲ್ಲಿರುವ ಹಳ್ಳಿಯೊಂದರ ನಿವಾಸಿ ಈ ಬಾಲಕಿ. ಈಕೆಯ ಹೆಸರು ಕಮರ್ ಗುಲ್​. ಕಳೆದ ವಾರ ಇವಳ ಮನೆಗೆ ನುಗ್ಗಿದ ನುಸುಳುಕೋರರು, ತಂದೆ-ತಾಯಿ ಇಬ್ಬರನ್ನೂ ಮನೆಯಿಂದ ಹೊರಗೆಳೆದುಕೊಂಡು ಹೋಗಿ, ಅಮಾನುಷವಾಗಿ ಹತ್ಯೆ ಮಾಡಿದ್ದಾರೆ. ಬಾಲಕಿಯ ತಂದೆ ಹಳ್ಳಿಯ ಮುಖ್ಯಸ್ಥನೂ ಆಗಿದ್ದವರಾಗಿದ್ದು, ಸರ್ಕಾರದ ಬೆಂಬಲಿಗರಾಗಿದ್ದರು ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಹಬೀಬುರಹ್ಮಾನ್​ ಮಲೇಕ್​ಝಾದಾ ತಿಳಿಸಿದ್ದಾರೆ.

ಹಳ್ಳಿಯ ಮುಖ್ಯಸ್ಥನನ್ನು ಕೊಲ್ಲಲು ಮುಂದಾದ ತಾಲಿಬಾನ್​ ಉಗ್ರರನ್ನು ಅವರ ಪತ್ನಿ ತಡೆಯಲು ಪ್ರಯತ್ನಿಸಿದ್ದಾರೆ. ಆಗ ಅವರನ್ನೂ ಉಗ್ರರು ಹತ್ಯೆ ಮಾಡಿದ್ದಾರೆ.

ಅದೇ ವೇಳೆ ಬಾಲಕಿ ಕಮರ್​ ಗುಲ್​ ಮನೆಯೊಳಗೆ ಇದ್ದಳು. ಸ್ವಲ್ಪವೂ ತಡ ಮಾಡದೆ ಮನೆಲ್ಲಿ ಇದ್ದ ಎಕೆ 47 ಗನ್​ ತೆಗೆದುಕೊಂಡು ಬಂದು ತಾಲಿಬಾನ್​ ಉಗ್ರರ ಕಡೆಗೆ ಗುಂಡು ಹಾರಿಸಿದ್ದಾಳೆ. ತನ್ನ ತಂದೆ-ತಾಯಿಯನ್ನು ಕೊಂದ ಇಬ್ಬರನ್ನು ಹತ್ಯೆಗೈದಿದ್ದಾಳೆ. ಹಾಗೇ ನಾಲ್ಕೈದು ಉಗ್ರರು ತೀವ್ರ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕರೊನಾ ಹೊತ್ತಲ್ಲಿ ಪುನೀತ್​ ರಾಜಕುಮಾರ್ ‘ಏನು ಮಾಡೋದು ಸ್ವಾಮಿ..’ ಅಂತಿರೋದ್ಯಾಕೆ?

ಗಲ್​ ಗೆ 14-16ವರ್ಷ ಆಗಿರಬಹುದು. ನಿಖರವಾದ ವಯಸ್ಸು ಗೊತ್ತಿಲ್ಲ. ಆಕೆ ಉಗ್ರರನ್ನು ಕೊಲ್ಲುತ್ತಿದ್ದಂತೆ ಇನ್ನಷ್ಟು ಜನ ಬಂದು ಅವಳ ಮನೆಯ ಮೇಲೆ ದಾಳಿ ಮಾಡಿದರು. ಆದರೆ ಅಷ್ಟರಲ್ಲಾಗಲೇ ಪೊಲೀಸ್, ಭದ್ರತಾ ಸಿಬ್ಬಂದಿಯೂ ಅಲರ್ಟ್​ ಆಗಿದ್ದರು. ಬಾಲಕಿಯನ್ನು ರಕ್ಷಿಸಲಾಗಿದ ಎಂದು ಹೇಳಿದ್ದಾರೆ.

ಸದ್ಯ ಗಲ್​ ಮತ್ತು ಆಕೆಯ ತಮ್ಮನನ್ನು ಸುರಕ್ಷಿತ ಜಾಗದಲ್ಲಿ ಇಡಲಾಗಿದೆ. ಈ ಸುದ್ದಿ ವೈರಲ್​ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಾಲಕಿಯ ಬಗ್ಗೆ ಅಪಾರ ಪ್ರಶಂಸೆ ವ್ಯಕ್ತವಾಗಿದೆ. ಹಲವು ಗಣ್ಯರೂ ಅವಳನ್ನು ಹೊಗಳಿದ್ದಾರೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)