ಬೆಂಗಳೂರು: ವಕೀಲ ಅರುಣ ಶ್ಯಾಮ ಸೇರಿ ಮೂವರನ್ನು ಹೆಚ್ಚುವರಿ ಅಡ್ವೋಕೇಟ್ ಜನರಲ್ಗಳನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ. ಈ ಸಂಬಂಧ, ರಾಜ್ಯಪಾಲರ ಆದೇಶಾನುಸಾರ ಕಾನೂನು ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಇಬ್ಬರದ್ದು ನೇಮಕವಾದರೆ, ಇನ್ನೊಬ್ಬರದ್ದು ಅವಧಿ ಮುಂದುವರಿಕೆಯಾಗಿದೆ.
ಈ ಆದೇಶದಲ್ಲಿರುವ ಮಾಹಿತಿ ಪ್ರಕಾರ, ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿದ್ದ ಆರ್.ನಟರಾಜ್ ಅವರು ನ್ಯಾಯಾಧೀಶರಾಗಿ ಬಡ್ತಿ ಪಡೆದುಕೊಂಡ ಕಾರಣ ತೆರವಾಗಿದ್ದ ಸ್ಥಾನಕ್ಕೆ ಅರುಣ ಶ್ಯಾಮ ಅವರ ನೇಮಕವಾಗಿದೆ. ಇದು ಬೆಂಗಳೂರು ಪೀಠದಲ್ಲಿನ ಹೆಚ್ಚುವರಿ ಅಡ್ವೋಕೇಟ್ ಜನರಲ್ -1 ಹುದ್ದೆಯಾಗಿದೆ. ಇದೇ ರೀತಿ, ಗುಲ್ಬರ್ಗ ಪೀಠದಲ್ಲಿ ಖಾಲಿ ಇದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಹುದ್ದೆಗೆ ವಕೀಲ ವೈ.ಎಚ್.ವಿಜಯಕುಮಾರ್ ನೇಮಕವಾಗಿದೆ.
ಇನ್ನು ಧಾರವಾಡ ಪೀಠದಲ್ಲಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಧ್ಯಾನ್ ಚಿನ್ನಪ್ಪ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದೆ.