ನ್ಯೂಸ್

ಮುಂದುವರಿದ ಪಾರಂಪರಿಕ ನಡಿಗೆ

ಮುಂದುವರಿದ ಪಾರಂಪರಿಕ ನಡಿಗೆ

ಅವಿನಾಶ್ ಜೈನಹಳ್ಳಿ

ಅವಿನಾಶ್ ಜೈನಹಳ್ಳಿ ಮೈಸೂರು

ನಾಡಹಬ್ಬ ದಸರಾ ಮಹೋತ್ಸವದ ಸಂದರ್ಭ ಹೊರತಾಗಿಯೂ ಮೈಸೂರಿನ ಪಾರಂಪರಿಕ ಕಟ್ಟಡಗಳ ಮಹತ್ವ ತಿಳಿಯುವ ಜತೆಗೆ, ಅವುಗಳ ಸೌಂದರ್ಯ ಸವಿಯುವ ಅವಕಾಶ ಸಾಂಸ್ಕೃತಿಕ ನಗರಿಯ ಜನರಿಗೆ ಒದಗಲಿದೆ.

ಪ್ರತಿ ತಿಂಗಳು ‘ಪಾರಂಪರಿಕ ನಡಿಗೆ’ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಪಾರಂಪರಿಕ ಕಟ್ಟಡಗಳ ಮಹತ್ವವನ್ನು ಸಾರ್ವಜನಿಕರಿಗೆ ಸಾರಲು ನಗರದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮುಂದಾಗಿದೆ.

ಈ ಬಾರಿಯ ದಸರಾ ಮಹೋತ್ಸವದ ಮೆರುಗು ಹೆಚ್ಚಿಸಿದ್ದ ‘ಪಾರಂಪರಿಕ ನಡಿಗೆ’ ಇದೀಗ ಮತ್ತೆ ಪ್ರತಿ ತಿಂಗಳ ಮೊದಲ ಶನಿವಾರ ಮುಂದುವರಿಯುತ್ತಿದೆ. ಅದರಂತೆ, ನ.2 ರಂದು ಕಾರ್ಯಕ್ರಮ ಆಯೋಜನೆಗೊಂಡಿರುವುದು ವಿಶೇಷವಾಗಿದೆ. ಜತೆಗೆ ವಿವಿಧ ಸಂಘ- ಸಂಸ್ಥೆಗಳಲ್ಲಿ ತರಬೇತಿ ಪಡೆಯುತ್ತಿರುವ ಸರ್ಕಾರಿ ಅಧಿಕಾರಿ ಮತ್ತು ಆಡಳಿತ ತರಬೇತಿ ಸಂಸ್ಥೆ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಪ್ರತಿ ಬುಧವಾರವೂ ಪಾರಂಪರಿಕ ನಡೆಗೆ ನಡೆಸಲು ಇಲಾಖೆ ಸಂಕಲ್ಪ ಮಾಡಿದೆ.

ಈ ‘ಪಾರಂಪರಿಕ ನಡಿಗೆ’ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಲ್ಲಿ ಪಾರಂಪರಿಕ ಕಟ್ಟಡಗಳ ಅರಿವು, ಮಹತ್ವವನ್ನು ವರ್ಷಪೂರ್ತಿ ಸಾರಲಿದೆ. ಅಲ್ಲದೆ, ಮುಖ್ಯವಾಗಿ ಮೈಸೂರಿನ ನೂರಾರು ವರ್ಷಗಳ ಹಳೆಯ ಕಟ್ಟಡಗಳು, ಅರಮನೆಗಳು, ಪಾರಂಪರಿಕ ಸ್ಮಾರಕಗಳ ಬಗ್ಗೆ ತಿಳಿಯಲು ಸದವಕಾಶ ಕಲ್ಪಿಸಿಕೊಟ್ಟಿದೆ ಎಂಬುದು ಗಮನೀಯ ಸಂಗತಿಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಪಾರಂಪರಿಕ ನಗರಿ ಮೈಸೂರಿನ ಕೀರ್ತಿ ಈ ಮೂಲಕ ಮತ್ತಷ್ಟು ಎತ್ತರ ತಲುಪಲಿದೆ.

ಈ ಬಾರಿಯ ದಸರಾ ಮಹೋತ್ಸವದಿಂದ ಮೈಸೂರು ಪ್ರವಾಸೋದ್ಯಮಕ್ಕೆ ಮತ್ತೆ ಜೀವಕಳೆ ಬಂದಿದೆ. ದಸರೆಯಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ ಪಾರಂಪರಿಕ ನಡಿಗೆ ಕಾರ್ಯಕ್ರಮ ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಈ ಮಧ್ಯೆ, ಪ್ರತಿ ತಿಂಗಳು ‘ಪಾರಂಪರಿಕ ನಡಿಗೆ’ ಕಾರ್ಯಕ್ರಮ ಆಯೋಜಿಸುತ್ತಿರುವುದು ಮೈಸೂರಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ. ಮೇಲಾಗಿ, ದಸರಾ ಮಹೋತ್ಸವದಲ್ಲಿ ‘ಪಾರಂಪರಿಕ ನಡಿಗೆ’ಯನ್ನು ಮಿಸ್ ಮಾಡಿಕೊಂಡವರು ಮುಂದಿನ ವರ್ಷದವರೆಗೂ ಕಾಯದೆ ನೋಡಬಹುದಾಗಿದೆ.

ಶನಿವಾರ ಬೆಳಗ್ಗೆ 6.30ಕ್ಕೆ ಪುರಭವನದಿಂದ ಆರಂಭ

ಪ್ರತಿ ತಿಂಗಳ ಮೊದಲ ಶನಿವಾರ ಬೆಳಗ್ಗೆ 6.30ಕ್ಕೆ ಪುರಭವನದಿಂದ ಸಾರ್ವಜನಿಕರಿಗಾಗಿ ಪಾರಂಪರಿಕೆ ನಡಿಗೆ ಚಾಲನೆ ಪಡೆಯಲಿದೆ. ಆಸಕ್ತರು ನೇರವಾಗಿ ಪುರಭವನದ ಬಳಿ ಬರಬಹುದು. ಪಾರಂಪರಿಕ ಕಟ್ಟಡಗಳು ಸಂದಿಸುವ ಐದು ಮಾರ್ಗದ ರೂಟ್‌ಮ್ಯಾಪ್ ಈಗಾಗಲೇ ಸಿದ್ಧಪಡಿಸಲಾಗಿದೆ. ಪ್ರತಿ ತಿಂಗಳು ಒಂದೊಂದು ಮಾರ್ಗದಲ್ಲಿ ಪಾರಂಪರಿಕ ನಡಿಗೆ ಸಾಗಲಿದೆ. ಆ ಮೂಲಕ ನಗರದ ಎಲ್ಲ ಪಾರಂಪರಿಕ ಕಟ್ಟಡಗಳಿಗೆ ಭೇಟಿ ನೀಡಿ, ಅವಗಳ ಐತಿಹಾಸಿಕ ಮಹತ್ವ ಸೇರಿದಂತೆ ಸಮಗ್ರ ಮಾಹಿತಿಯನ್ನು ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ಪಡೆಯಬಹುದಾಗಿದೆ.

ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಮೈಸೂರಿನ ಇತಿಹಾಸ ತಜ್ಞರು ಪಾರಂಪರಿಕ ಕಟ್ಟಡದ ಹಿನ್ನೆಲೆ, ಪ್ರಾಮುಖ್ಯತೆ ಹಾಗೂ ವಾಸ್ತುಶಿಲ್ಪ ಶೈಲಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ. ಪಾರಂಪರಿಕ ನಡಿಗೆ ಸಂಬಂಧ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ನಗರದ ಎಲ್ಲ ಹೋಟೆಲ್, ಶಾಲಾ-ಕಾಲೇಜು, ಕಚೇರಿಗಳಿಗೆ ಪೂರಕ ಮಾಹಿತಿ ನೀಡಲಾಗಿದೆ. ಆ ಮೂಲಕ ಮೈಸೂರಿಗೆ ಬರುವ ಪ್ರವಾಸಿಗರು, ವಿದ್ಯಾರ್ಥಿಗಳು, ಉದ್ಯೋಗಿಗಳು ನಡಿಗೆಯಲ್ಲಿ ಭಾಗವಹಿಸಲು ಪ್ರೇರೇಪಿಸಲಾಗಿದೆ.

ಎಲ್ಲೆಲ್ಲಿ ಭೇಟಿ?

ಪುರಭವನ, ಸಯ್ಯಜಿರಾವ್ ರಸ್ತೆ, ಆಯುರ್ವೇದ ಕಾಲೇಜು ವೃತ್ತ, ದೊಡ್ಡಗಡಿಯಾರ, ಕೆ.ಆರ್.ಮಾರುಕಟ್ಟೆ, ಕೆ.ಆರ್.ಆಸ್ಪತ್ರೆ, ಮಹಾರಾಜ ಕಾಲೇಜು, ಜಿಲ್ಲಾಧಿಕಾರಿ ಕಚೇರಿ ಹಳೇ ಕಟ್ಟಡ, ರೈಲ್ವೆ ನಿಲ್ದಾಣ, ಕ್ರಾಫರ್ಡ್ ಹಾಲ್, ಪರಕಾಲ ಮಠ, ಪದ್ಮಾಲಯ, ಮುಡಾ ವೃತ್ತ, ಕಾವಾ ಕಾಲೇಜಿನ ಹಳೇ ಕಟ್ಟಡ, ಫ್ರಿಮೇಷನ್ ಕ್ಲಬ್, ಚಾಮರಾಜೇಂದ್ರ ಒಡೆಯರ್ ವೃತ್ತ, ಅಂಬಾವಿಲಾಸ ಅರಮನೆ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ಚಿಕ್ಕಗಡಿಯಾರ, ದೇವರಾಜ ಮಾರುಕಟ್ಟೆ, ಮೈಸೂರು ಮೆಡಿಕಲ್ ಕಾಲೇಜು, ಸರ್ಕಾರಿ ಆಯುರ್ವೇದ ಕಾಲೇಜು ಸೇರಿದಂತೆ ವಿವಿಧ ಕಟ್ಟಡಗಳಿಗೆ ಭೇಟಿ ನೀಡುವ ಮೂಲಕ ಅವುಗಳ ಸಂಕ್ಷಿಪ್ತ ಇತಿಹಾಸ ಮತ್ತು ಮಹತ್ವವನ್ನು ಈ ಸಂದರ್ಭದಲ್ಲಿ ಮೆಲುಕು ಹಾಕಬಹುದಾಗಿದೆ.

ಮಹತ್ವ ಉಳಿಸುವ ಯತ್ನ

ನಗರದಲ್ಲಿ 600ಕ್ಕೂ ಹೆಚ್ಚು ಕಟ್ಟಡಗಳನ್ನು ಪಾರಂಪರಿಕ ಕಟ್ಟಡಗಳೆಂದು ಗುರುತಿಸಲಾಗಿತ್ತು. ಈ ಪೈಕಿ ಕೆಲವು ಕಟ್ಟಡಗಳು ಈಗಾಗಲೇ ಹಾಳಾಗಿವೆ. ನೂರು ವರ್ಷ ತುಂಬಿರುವ 100 ಕಟ್ಟಡಗಳು ಮೈಸೂರಿನಲ್ಲಿ ಇವೆ. ಹತ್ತಾರು ಅರಮನೆಗಳಿವೆ. ನೂರು ವರ್ಷ ತುಂಬಿರುವ ಅನೇಕ ಮನೆಗಳೂ ಇವೆ. ಉಳಿದ ಕಟ್ಟಡಗಳ ರಕ್ಷಣೆ ಮತ್ತು ಮಹತ್ವ ಪಾಲನೆ ನಿಟ್ಟಿನಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪುರಾತತ್ವ ಇಲಾಖೆ, ನಗರಪಾಲಿಕೆ, ಸರ್ಕಾರ ಹಾಗೂ ಜಿಲ್ಲಾಡಳಿತ ಎಲ್ಲ ರೀತಿಯ ಕ್ರಮ ವಹಿಸುತ್ತಿವೆ. ಸಾರ್ವಜನಿಕರೂ ಪಾರಂಪರಿಕ ಕಟ್ಟಡಗಳ ಐತಿಹಾಸಿಕ ಮಹತ್ವ ಅರಿತು, ಅವುಗಳನ್ನು ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪಾರಂಪರಿಕ ಕಟ್ಟಡಗಳ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನವನ್ನು ಮಾಡಬೇಕಾಗಿದೆ. ಈ ಮೂಲಕ ಪಾರಂಪರಿಕ ನಗರಿ ಮೈಸೂರಿನ ಚಾರಿತ್ರಿಕ ಘನತೆ, ಪರಂಪರೆಯನ್ನು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುವ ಕೆಲಸ ಮಾಡಬೇಕಿದೆ ಎಂಬುದು ಕಾರ್ಯಕ್ರಮದ ಮೂಲ ಆಶಯವಾಗಿದೆ.

ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಲ್ಲಿ ಪಾರಂಪರಿಕ ಕಟ್ಟಡಗಳ ಮಾಹಿತಿ, ಮಹತ್ವವನ್ನು ಸಾರುವ ಉದ್ದೇಶದಿಂದ ‘ಪಾರಂಪರಿಕ ನಡಿಗೆ’ಯನ್ನು ಪ್ರತಿ ತಿಂಗಳ ಮೊದಲ ಶನಿವಾರ ಮುಂದುವರಿಸಲಾಗುವುದು. ಅಂತೆಯೆ, ಮುಂದಿನ ಕಾರ್ಯಕ್ರಮ ನ. 2 ರಂದು ನಡೆಯಲಿದೆ. ಎಲ್ಲರೂ ಮುಕ್ತವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಮಂಜುಳಾ ಉಪ ನಿರ್ದೇಶಕಿ, ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ