ಲಖನೌ: ಅರಣ್ಯ ಕೃಷಿಯನ್ನು ಉತ್ತೇಜಿಸಲು ಉತ್ತರ ಪ್ರದೇಶ ಸರ್ಕಾರ ಕಾರ್ಬನ್ ಕ್ರೆಡಿಟ್ಗಾಗಿ ರೈತರಿಗೆ ಮುಂಗಡ ಪಾವತಿ ಮಾಡಲು ನಿರ್ಧರಿಸಿದ್ದು, 237 ರೈತರಿಗೆ ಮುಂಗಡ ಪಾವತಿಸಲಾಗಿದೆ. ಅರಣ್ಯ ಕೃಷಿಯನ್ನು ಅಳವಡಿಸಿಕೊಂಡಿರುವ ರೈತರಿಗೆ ಅವರ ಭೂಮಿಯಲ್ಲಿರುವ ಮರಗಳ ಆಧಾರದಲ್ಲಿ ಕಾರ್ಬನ್ ಕ್ರೆಡಿಟ್ ಹಣವನ್ನು ನೀಡಲಾಗುತ್ತದೆ.
ಆದರೆ ಈ ಯೋಜನೆಗೆ ಉತ್ತೇಜನ ನೀಡಲು ತಮ್ಮ ಜಮೀನಿನಲ್ಲಿ ಮರಗಳನ್ನು ಬೆಳೆಸಿರುವ ರೈತರಿಗೆ ಮುಂಗಡವಾಗಿಯೇ ಕಾರ್ಬನ್ ಕ್ರೆಡಿಟ್ ಹಣವನ್ನು ಬಿಡುಗಡೆ ಮಾಡಲಾಗಿದೆ. ಮೊದಲ ಹಂತದಲ್ಲಿ 237 ರೈತರಿಗೆ 48.6 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗಿದೆ. ರೈತರಿಗೆ ಸರಾಸರಿ 10 ಸಾವಿರ ರೂ.ವರೆಗೆ ಮುಂಗಡ ಪಾವತಿ ಮಾಡಲಾಗಿದೆ. ಐದು ವರ್ಷದ ಬಳಿಕ ಕತ್ತರಿಸದೆ ಉಳಿದಿರುವ ಮರಗಳಿಗೆ ಮಾತ್ರ ಉಳಿದ ಹಣ ನೀಡಲಾಗುವುದು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಅರಣ್ಯ ಕೃಷಿ ಯೋಜನೆಯ ಮೊದಲ ಹಂತದಲ್ಲಿ ಇದುವರೆಗೆ 25,140 ರೈತರು ನೋಂದಾಯಿಸಿ ಕೊಂಡಿದ್ದಾರೆ. ಎರಡನೇ ಹಂತದ ಯೋಜನೆಯ ನೋಂದಣಿ ಒಂದು ತಿಂಗಳ ಹಿಂದೆ ಅರಂಭವಾಗಿದೆ. ನೆಡುತೋಪು ಮತ್ತು ಅದರ ಸಂರಕ್ಷಣೆಯ ಮೂಲಕ 2024ರ ಜುಲೈನಲ್ಲಿ ಗಳಿಸಿದ ಕಾರ್ಬನ್ ಕ್ರೆಡಿಟ್ಗಾಗಿ ಮುಂಗಡ ಪಾವತಿಸಿದ ಮೊದಲ ರಾಜ್ಯ ಉತ್ತರಪ್ರದೇಶ. ಆ ಬಳಿಕ ಆಗಸ್ಟ್ 2024ರಲ್ಲಿ ಪಂಜಾಬ್ನಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿತ್ತು.
ಏನಿದು ರೈತರ ಕಾರ್ಬನ್ ಕ್ರೆಡಿಟ್?
ರೈತರು ತಮ್ಮ ಜಮೀನಿನಲ್ಲಿ ಬೆಳೆಸುವ ಗಿಡ-ಮರಗಳು ವಾತಾವರಣದಲ್ಲಿರುವ ಇಂಗಾಲ ಡೈ ಆಕ್ಸೈಡ್ ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಈ ಮೂಲಕ ರೈತರು ವಾತಾವರಣದಲ್ಲಿರುವ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಕಾರ್ಬನ್ ಕ್ರೆಡಿಟ್ ಗಳಿಸುತ್ತಾರೆ. ಅವರ ಕಾರ್ಬನ್ ಕ್ರೆಡಿಟ್ ಪ್ರಮಾಣಕ್ಕೆ ಅನುಗುಣವಾಗಿ ಅವರಿಗೆ ಪ್ರೋತ್ಸಾಹಧನ ಬಿಡುಗಡೆಯಾಗುತ್ತದೆ.