ಶಿವಮೊಗ್ಗ: ಆಟೋ ಪ್ರಯಾಣಿಕರಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸಲು ಜಿಲ್ಲಾಡಳಿತ ಮಹತ್ವದ ನಿರ್ಣಯ ಕೈಗೊಂಡಿದೆ. ಸೆ.1ರಿಂದಲೇ ಅನ್ವಯ ಆಗುವಂತೆ ನಗರದ ರೈಲ್ವೆ ನಿಲ್ದಾಣದಿಂದ ಪ್ರೀಪೇಯ್ಡ ಆಟೋ ಕೌಂಟರ್‌ಗಳನ್ನು ಪ್ರಾಯೋಗಿಕವಾಗಿ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಪ್ರೊಬೇಷನರಿ ಐಎಎಸ್ ಅಧಿಕಾರಿ ನಾಗೇಂದ್ರ ಬಾಬು, ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಶಿರೋಳ್ಕರ್, ಅಧೀಕ್ಷಕ ಶಶಿಧರ್, ಮಲ್ಲೇಶಪ್ಪ, ಕೆಎಸ್‌ಆರ್‌ಟಿಸಿ ನಿಯಂತ್ರಣಾಧಿಕಾರಿ ದಿನೇಶ್‌ಕುಮಾರ್, ರೈಲ್ವೆ ಇಲಾಖೆ ಅಧಿಕಾರಿ ಬಿಶ್ವಾಸ್, ಮಂಜುನಾಥ್ ಇತರರಿದ್ದರು.
ಆರಂಭಿಕ ಹಂತದಲ್ಲಿ ರೈಲ್ವೆ ನಿಲ್ದಾಣದ ಮೂರು ಸ್ಥಳಗಳಲ್ಲಿ ಕೌಂಟರ್‌ಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯ ವ್ಯವಸ್ಥಾಪಕರು ಆಸಕ್ತಿ ವಹಿಸಿದ್ದಾರೆ. ಈಗಾಗಲೇ ಅದರ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪ್ರೀಪೇಯ್ಡ್ ಆಟೋ ಕೌಂಟರ್ ಆರಂಭಿಸುವ ಕುರಿತು ಸಂಬಂಧಿತ ಇಲಾಖಾಧಿಕಾರಿಗಳ ಸಭೆ ನಡೆಸಿದ ಅವರು, ಪೊಲೀಸ್, ಸಾರಿಗೆ, ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಅನುಷ್ಠಾನಕ್ಕೆ ತರಲಾಗುವುದು. ಅದಕ್ಕೂ ಮುನ್ನ ಆಟೋ ಚಾಲಕರು ಮತ್ತು ಮಾಲೀಕರ ಅಭಿಪ್ರಾಯ ಪಡೆದು, ಸಾರ್ವಜನಿಕರು ಹಾಗೂ ಆಟೋ ಚಾಲಕರಿಗೆ ಅನುಕೂಲವಾಗುವಂತೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಗಮನ ಸೆಳೆದಿದ್ದ ವಿಜಯವಾಣಿ ನಗರದಲ್ಲಿ ಪ್ರಿಪೇಯ್ಡಿ ಆಟೋ ಸೇವೆಯನ್ನು ಆರಂಭಿಸುವ ಬಗ್ಗೆ ವಿಜಯವಾಣಿ ದಿನಪತ್ರಿಕೆ 2024ರ ನ.9ರಂದು ‘ಪ್ರಿಪೇಯ್ಡಿ ಆಟೋ ಸೇವೆಗೆ ನಿರಾಸಕ್ತಿ’ ಶಿರ್ಷೀಕೆಯಡಿ ವಿಶೇಷ ವರದಿ ಪ್ರಕಟಿಸಿ ಜಿಲ್ಲಾಡಳಿತ, ಆರ್‌ಟಿಒ ಮತ್ತು ಪೊಲೀಸ್ ಇಲಾಖೆಯ ಗಮನ ಸೆಳೆದಿತ್ತು. ಇದೀಗ ಜಿಲ್ಲಾಡಳಿತ ಅಧಿಕಾರಿಗಳ ಸಭೆ ನಡೆಸಿ ಸೆ.1ರಿಂದ ರೈಲ್ವೆ ನಿಲ್ದಾಣದಿಂದ ಕಾರ್ಯಾಚರಣೆಗೆ ಸೂಚಿಸಿದೆ.