ಬೆಂಗಳೂರು: ವೈದ್ಯಕಿಯ ಮತ್ತು ದಂತ ವೈದ್ಯಕಿಯ ಕೋರ್ಸ್ಗಳ ಪ್ರವೇಶಕ್ಕೆ ಮೊದಲ ಮತ್ತು ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಪ್ರವೇಶ ಪಡೆಯದೇ ಇರುವವರು ಮತ್ತೊಮ್ಮೆ ಸೀಟು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಅಭ್ಯರ್ಥಿಗಳು ಹಾಗೂ ಪಾಲಕರ ಮನವಿ ಮೇರೆಗೆ ಮತ್ತೊಮ್ಮೆ ಸೀಟು ಆಯ್ಕೆಗೆ ಕೌನ್ಸೆಲಿಂಗ್ ನಡೆಸಲು ತೀರ್ಮಾನಿಸಲಾಗಿದೆ. ಈ ವಿಚಾರದಲ್ಲಿ ಮಧ್ಯವರ್ತಿಗಳಿಂದ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ.
ಮೊದಲ ಹಾಗೂ ಎರಡನೇ ಸುತ್ತಿನ ತಾತ್ಕಾಲಿಕ ಫಲಿತಾಂಶ ನಂತರ 4ನೇ ಚಾಯ್ಸ್ ಮಾಡಿರುವವರಲ್ಲಿ ಕೆಲವರು ಸೀಟು ಬೇಡವೆಂದು ಬಿಟ್ಟು ಹೋಗಿದ್ದಾರೆ. ಈ ಸುತ್ತಿನಲ್ಲಿ ಕಾಷನ್ ಡೆಪಾಸಿಟ್ ಪಾವತಿಸಿ ಭಾಗವಹಿಸಬೇಕು ಎಂದು ತಿಳಿಸಿದ್ದಾರೆ. ಎರಡನೇ ಸುತ್ತಿನ ಅಂತಿಮ ಫಲಿತಾಂಶ ಬಳಿಕ ದಂಡ ಪಾವತಿಸಿ ಸೀಟು ರದ್ದುಪಡಿಸಿಕೊಂಡವರು ಸಹ ಭಾಗವಹಿಸಬಹುದು. ಆದರೆ ದಂಡ ಪಾವತಿಸದೆ ಎಂಸಿಸಿ ಸೇರಿ ಇತರ ರಾಜ್ಯಗಳಲ್ಲಿ ಸೀಟು ಸಿಕ್ಕಿದೆ ಎಂದು ಹೇಳಿ ಚಾಯ್ಸ್- 4 ಆಯ್ಕೆ ಮಾಡಿಕೊಂಡು ಹೊರ ಹೋದವರು ಭಾಗವಹಿಸಲು ಅವಕಾಶವಿಲ್ಲ. 10 ಸಾವಿರ ರೂ. ದಂಡ ಪಾವತಿಸಿ ಭಾಗವಹಿಸಬಹುದು ಎಂದು ಮಾಹಿತಿ ನೀಡಿದ್ದಾರೆ. ಸೀಟ್ ಮ್ಯಾಟ್ರಿಕ್ಸ್ ತಡವಾದ ಕಾರಣ ಆಯುಷ್ ಕೌನ್ಸೆಲಿಂಗ್ ತಡವಾಗಿದೆ. 70 ಕಾಲೇಜುಗಳ ಸೀಟ್ ಮ್ಯಾಟ್ರಿಕ್ಸ್ ಬಂದಿದ್ದು, ಆದಷ್ಟು ಬೇಗ ಕೌನ್ಸೆಲಿಂಗ್ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.