Shashi Tharoor | ಕಾಂಗ್ರೆಸ್ ಸಂಸದ ತರೂರ್
ನವದೆಹಲಿ: ಅಮೆರಿಕದ ಮಿಲಿಟರಿ ದಾಳಿಗೆ ಮೂವರು ಭಾರತೀಯ ನಾವಿಕರು ಬಲಿಯಾದ ಘಟನೆಗೆ ಸಂಬಂಧಿಸಿದಂತೆ, ಜಿ-7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ರಾಜತಾಂತ್ರಿಕ ನಿಲುವಿನ ವಿಚಾರವಾಗಿ ಕಾಂಗ್ರೆಸ್ ಪಕ್ಷದೊಳಗೆ ತೀವ್ರ ಭಿನ್ನಾಭಿಪ್ರಾಯ ಸ್ಫೋಟಗೊಂಡಿದ್ದು, ಪ್ರಧಾನಿ ಮೋದಿ ಅವರ ನಡೆಗೆ ಸಂಸದ ಶಶಿ ತರೂರ್ (Shashi Tharoor) ವ್ಯಕ್ತಪಡಿಸಿದ ಮೆಚ್ಚುಗೆ ಸ್ವಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಭಾರತೀಯ ನಾವಿಕರ ಸುರಕ್ಷತೆಯ ವಿಷಯವನ್ನು ಸಾರ್ವಜನಿಕ ಹಾಗೂ ಖಾಸಗಿ ಮಾತುಕತೆಗಳಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಸಂಸದ ತರೂರ್ ಹೇಳಿಕೆ ನೀಡಿದ್ದರು.
ತರೂರ್ ಮೆಚ್ಚುಗೆ ಭೌತಿಕ ಪ್ರಪಂಚದ ಮಿತಿಗಳನ್ನು ಮೀರಿದೆ!..
ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಾಜ್ಯಸಭಾ ಸದಸ್ಯ ಪವನ್ ಖೇರಾ, ತರೂರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಅಧಿಕೃತ ಪತ್ರಿಕಾಗೋಷ್ಠಿಯ ವಿಡಿಯೋ ತುಣುಕನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಖೇರಾ, ನನ್ನ ಹಿರಿಯ ಸಹೋದ್ಯೋಗಿ ಡಾ ಶಶಿ ತರೂರ್ ಅವರ ಮೋದಿ ಮೇಲಿನ ಮೆಚ್ಚುಗೆಯು ಭೌತಿಕ ಪ್ರಪಂಚದ ಮಿತಿಗಳನ್ನು ಮೀರಿದಂತಿದೆ. ಅವರು ಈಗ ಮೋದಿ ಹೇಳದೇ ಇರುವ ಮಾತುಗಳನ್ನು ಸಹ ಕೇಳಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಆಪರೇಷನ್ ಸಿಂಧೂರ ಬಳಿಕ ನಡೆದ ಮೊದಲ ಮೋದಿ-ಟ್ರಂಪ್ ಸಭೆಯ ಇದಾಗಿದ್ದರೂ, ಜಿ-7 ಶೃಂಗಸಭೆಯ ಸಂದರ್ಭದಲ್ಲಿ ನಡೆದ ಈ ಭೇಟಿಯ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಬಿಡುಗಡೆ ಮಾಡಿದ ಅಧಿಕೃತ ವರದಿಯಲ್ಲಿ ಒಮಾನ್ ಗಲ್ಫ್‌ನಲ್ಲಿ ಅಮೆರಿಕದಿಂದ ನಡೆದ ಮೂವರು ಭಾರತೀಯ ನಾವಿಕರ ಕೋಲ್ಡ್ ಬ್ಲಡೆಡ್ (ಕ್ರೂರ) ಹತ್ಯೆಯ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಅಷ್ಟೇ ಅಲ್ಲದೆ, ಭಾರತಕ್ಕೆ ವ್ಯಾಪಾರ ನಿರ್ಬಂಧ ಹೇರುವ ಬೆದರಿಕೆ ಒಡ್ಡಿ ತಾವು ಕದನ ವಿರಾಮವನ್ನು ಪಡೆದುಕೊಂಡಿದ್ದಾಗಿ ಟ್ರಂಪ್ ಅವರು ಈಗಾಗಲೇ 120ಕ್ಕೂ ಹೆಚ್ಚು ಬಾರಿ ಪುನರಾವರ್ತಿಸಿರುವ ಹೇಳಿಕೆಗೆ ಮೋದಿ ಎಲ್ಲೂ ಆಕ್ಷೇಪ ವ್ಯಕ್ತಪಡಿಸಿದ ಯಾವುದೇ ಸೂಚನೆಗಳೂ ಅಧಿಕೃತ ದಾಖಲೆಯಲ್ಲಿಲ್ಲ ಎಂದು ಖೇರಾ ಆರೋಪಿಸಿದ್ದಾರೆ.
ಮಿಲಾನ್-2026 (MILAN-2026) ಯುದ್ಧಾಭ್ಯಾಸದಲ್ಲಿ ಭಾರತದ ಅತಿಥಿಯಾಗಿದ್ದ ಇರಾನ್‌ನ ಐಆರ್‌ಐಎಸ್ ದೇನಾ (IRIS Dena) ಯುದ್ಧನೌಕೆಯ ಮೇಲಿನ ದಾಳಿಯ ಬಗ್ಗೆಯೂ ಅಧಿಕೃತ ವರದಿಯಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ಖೇರಾ ಸ್ಪಷ್ಟಪಡಿಸಿದ್ದಾರೆ. ಇಷ್ಟೆಲ್ಲಾ ವಾಸ್ತವಗಳಿದ್ದರೂ, ಅಧಿಕೃತ ದಾಖಲೆಯಲ್ಲೇ ಇಲ್ಲದ ಪ್ರಬಲ ಪ್ರತಿಪಾದನೆಗಳು, ರಾಜತಾಂತ್ರಿಕ ನಡೆಯನ್ನು ಮತ್ತು ರಾಜಿ ಮಾಡಿಕೊಳ್ಳದ ಮುತ್ಸದ್ದಿತನವನ್ನು ತರೂರ್ ಅವರು ಹೇಗೆ ಕೇಳಿಸಿಕೊಂಡರು..? ಬಹುಶಃ ನಮ್ಮಂತಹ ಸಾಮಾನ್ಯರು ಸಾಮಾನ್ಯ ಮಾನವ ಸಂವೇದನೆಗಳಿಗೆ ಸೀಮಿತವಾಗಿದ್ದೇವೆ. ಆದರೆ ಮಹಾ-ಮಾನವ ಮೋದಿ ಅವರ ಭಕ್ತರಿಗೆ, ಮೋದಿ ಎಷ್ಟು ಕಡಿಮೆ ಮಾತನಾಡುತ್ತಾರೋ ಅಷ್ಟು ಹೆಚ್ಚು ಕೇಳಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ತರೂರ್ ತಿರುಗೇಟು...
ಪವನ್ ಖೇರಾ ಅವರ ಟೀಕೆಗೆ ಉತ್ತರಿಸಿರುವ ಶಶಿ ತರೂರ್, ಭಾರತೀಯ ನಾಗರಿಕರ ಜೀವ ರಕ್ಷಣೆಯಂತಹ ಗಂಭೀರ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತಾವೇನೂ ಪ್ರಧಾನಿ ಮೋದಿ ಅವರಿಗೆ ಸ್ವಂತವಾಗಿ ಮಾತುಗಳನ್ನು ಆರೋಪಿಸಿಲ್ಲ, ಬದಲಿಗೆ ಮುದ್ರಣ ಮಾಧ್ಯಮಗಳಲ್ಲಿ ಬಂದ ವರದಿಗಳು ಮತ್ತು ಗೂಗಲ್ ಜೆಮಿನಿ ಸಿದ್ಧಪಡಿಸಿದ ಸುದ್ದಿ ಸಾರಾಂಶಗಳನ್ನು ಆಧರಿಸಿಯೇ ತಾವು ಈ ಹೇಳಿಕೆ ನೀಡಿರುವುದಾಗಿ ಸ್ಪಷ್ಟಪಡಿಸಿ ಆ ಲಿಂಕ್‌ಗಳನ್ನು ಹಂಚಿಕೊಂಡಿದ್ದಾರೆ. ನಾಗರಿಕ ನಾವಿಕರ ಸುರಕ್ಷತೆಯ ವಿಷಯದಲ್ಲಿ ದೇಶ ಒಂದಾಗಬೇಕೇ ಹೊರತು ರಾಜಕೀಯ ಕಾರಣಕ್ಕೆ ವಿಭಜನೆಯಾಗಬಾರದು ಎಂದು ಅವರು ಪ್ರತಿಪಾದಿಸಿದ್ದಾರೆ(ಏಜೆನ್ಸೀಸ್).