ನ್ಯೂಸ್

ಮೈಸೂರಿನ ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ ಹುದ್ದೆಗಳ ನೇಮಕಾತಿ ಅಕ್ರಮ; ಕವಿವಿ ಕಾರವಾರ ಪಿಜಿ ಸೆಂಟರ್‌ನ ಆಡಳಿತಾಧಿಕಾರಿ ಅಮಾನತು

  • ವಿಜಯವಾಣಿ ಸುದ್ದಿಜಾಲ ಧಾರವಾಡ
    ಮೈಸೂರಿನ ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್‌ನ 21 ಹುದ್ದೆಗಳ ನೇಮಕಾತಿ ಅಕ್ರಮಕ್ಕೆ ಸಂಬ0ಧಿಸಿ ನಗರದ ಕರ್ನಾಟಕ ವಿಶ್ವವಿದ್ಯಾಲಯ ಅಧೀನದ ಕಾರವಾರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಡಳಿತಾಧಿಕಾರಿ ಡಾ. ಜೆ.ಎಲ್ ರಾಠೋಡ ಎಂಬುವರನ್ನು ಅಮಾನತು ಮಾಡಿ ಕವಿವಿ ಆದೇಶ ಹೊರಡಿಸಿದೆ.
    1920ರಲ್ಲಿ ಸ್ಥಾಪಿತ ಮೈಸೂರಿನ ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್‌ನ ವಿವಿಧ ಹುದ್ದೆಗಳ ನೇಮಕಾತಿಗೆ 2024ರ ಮಾ. 10ರಂದು ಲಿಖಿತ ಪರೀಕ್ಷೆ ನಡೆದಿತ್ತು. ವಿಶ್ವವಿದ್ಯಾಲಯ ಅನುಮತಿ ಪಡೆಯದೆ ಕಾರವಾರ ಸ್ನಾತಕೋತ್ತರ ಅಧ್ಯಯನ ಕೇಂದ್ರವು ಪರೀಕ್ಷಾ ಪ್ರಾಽಕಾರವಾಗಿ ನೇಮಕಾತಿ ಪರೀಕ್ಷೆ ನಡೆಸಿರುವ ಆರೋಪ ಕೇಳಿಬಂದಿತ್ತು. ಅಲ್ಲದೆ, ತಮಗೆ ಬೇಕಾದ ಅಭ್ಯರ್ಥಿಗಳಿಗೆ ಮಾತ್ರ ಗೊತ್ತಾಗುವಂತೆ ಪ್ರಶ್ನೆಪತ್ರಿಕೆಯಲ್ಲಿನ 50 ಪ್ರಶ್ನೆಗಳ ಬಹು ಆಯ್ಕೆಗಳಲ್ಲಿ ಸರಿಯಾದ ಆಯ್ಕೆಯನ್ನು ಸಣ್ಣದಾಗಿ ಮುದ್ರಿಸಿ ಅಕ್ರಮ ಎಸಗಲಾಗಿತ್ತು. ಅಲ್ಲದೆ, ಉದ್ದೇಶಪೂರ್ವಕವಾಗಿ ಅಭ್ಯರ್ಥಿಗಳಿಗೆ ಒಎಂಆರ್ ಪ್ರತಿ ನೀಡಿರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು.
    ಈ ಕುರಿತು ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿ ಜಿನ್ನಾಂಬೆ ಎಂಬುವರು ಮೈಸೂರಿನ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಕವಿವಿಯ ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ವಿಭಾಗವು ಆ. 19ರಂದು ಸತ್ಯಶೋಧನಾ ಸಮಿತಿ ರಚಿಸಿ ತನಿಖೆಗೆ ಸೂಚಿಸಿತ್ತು. ಸಮಿತಿಯವರು 23ರಂದು ಕಾರವಾರ ಸ್ನಾತಕೋತ್ತರ ಕೇಂದ್ರಕ್ಕೆ ಭೇಟಿ ನೀಡಿದಾಗ ಡಾ. ರಾಠೋಡ ಸಮರ್ಪಕ ದಾಖಲಾತಿಗಳನ್ನು ಸಲ್ಲಿಸಿರಲಿಲ್ಲ. ಅಲ್ಲದೆ, 15 ದಿನಗಳ ಕಾಲಾವಕಾಶ ಕೇಳಿದ್ದರು.
    ನೇಮಕಾತಿ ಪರೀಕ್ಷಾ ಅಕ್ರಮ ವಿಷಯ ಆ. 27ರಂದು ಸಿಂಡಿಕೇಟ್ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಸಿಬ್ಬಂದಿ ಸೇವಾ ನಿಯಮ 1993ರ ಉಲ್ಲಂಘನೆಯಾಗಿದೆ ಎಂದು ಸಿಂಡಿಕೇಟ್ ಸಭೆ ತೀರ್ಮಾನಿಸಿದೆ. ತಕ್ಷಣದಿಂದ ಡಾ. ರಾಠೋಡ ಅವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ.