ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿತೆ ಪವಿತ್ರಾಗೌಡ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಆ.೨೭ಕ್ಕೆ ಮುಂದೂಡಿದೆ.
ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿರುವ ೧೭ ಆರೋಪಿಗಳ ಪೈಕಿ ಪವಿತ್ರಾಗೌಡ ಅವರು ಮೊದಲಿಗರಾಗಿ ಜಾಮೀನು ಕೋರಿ ವಕೀಲರ ಮೂಲಕ ಬೆಂಗಳೂರಿನ ೫೭ನೇ ಸಿಸಿಎಚ್ ನ್ಯಾಯಾಲಯಕ್ಕೆ ಆ.೧೯ರಂದು ಅರ್ಜಿ ಸಲ್ಲಿಸಿದ್ದರು. ಬಳಿಕ ನ್ಯಾಯಾಲಯ ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ವಿಶೇಷ ಸರ್ಕಾರಿ ಅಭಿಯೋಜಕರಿಗೆ (ಎಸ್‌ಪಿಪಿ) ಸೂಚಿಸಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತ್ತು. ಆರೋಪಿ ಪವಿತ್ರಾಗೌಡಗೆ ಜಾಮೀನು ನೀಡದಂತೆ ಗುರುವಾರ ಆಕ್ಷೇಪಣೆ ಸಲ್ಲಿಸಿದ ಎಸ್‌ಪಿಪಿ, ಚಿತ್ರದುರ್ಗದ ರೇಣುಕಸ್ವಾಮಿಯನ್ನು ಬೆಂಗಳೂರಿನಲ್ಲಿ ಕೊಲೆ ಮಾಡಿಸಿದ ಆರೋಪ ಪವಿತ್ರಾಗೌಡ ಅವರ ಮೇಲಿದೆ. ಈ ಪ್ರಕರಣದಲ್ಲಿ ನಟ ದರ್ಶನ್ ಕೂಡ ಪ್ರಮುಖ ಆರೋಪಿ. ಇವರೆಲ್ಲರೂ ಪ್ರಭಾವಿ ವ್ಯಕ್ತಿಗಳಾದ ಕಾರಣ ಜಾಮೀನು ನೀಡಿದರೆ ಸಾಕ್ಷಿ ನಾಶಕ್ಕೆ ಪ್ರಯತ್ನಿಸುವ ಸಾಧ್ಯತೆಯಿದೆ. ಹೀಗಾಗಿ, ಜಾಮೀನು ನೀಡಬಾರದು ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದರು.
ಮನವಿ ಪುರಸ್ಕರಿಸಿದ ನ್ಯಾಯಾಧೀಶರು, ಅರ್ಜಿ ವಿಚಾರಣೆಯನ್ನು ಆ.೨೭ಕ್ಕೆ ಮುಂದೂಡಿ ಆದೇಶ ಹೊರಡಿಸಿದರು. ಇದರೊಂದಿಗೆ ಎರಡನೇ ಬಾರಿಗೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದ್ದು, ಪವಿತ್ರಾಗೌಡ ಅವರು ಮತ್ತಷ್ಟು ದಿನ ಜೈಲಿನಲ್ಲಿ ಕಾಲ ಕಳೆಯುವುದು ಅನಿವಾರ್ಯವಾಗಿದೆ.