ತಿ.ನರಸೀಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ದಾವಣಗೆರೆ ಜಿಲ್ಲಾ ಘಟಕದಿಂದ ಎಂಬಿಎ ಕಾಲೇಜು ಮೈದಾನದಲ್ಲಿ ಡಿ.23 ಮತ್ತು 24 ರಂದು 24ನೇ ಮಹಾ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ ಹೇಳಿದರು.
ಪಟ್ಟಣದ ವಿವೇಕಾನಂದ ನಗರದಲ್ಲಿರುವ ವೀರಶೈವ ವಿದ್ಯಾರ್ಥಿನಿಲಯದಲ್ಲಿ ವೀರಶೈವ ಮಹಾಸಭಾ ಹಾಗೂ ಯುವ ಘಟಕದ ವತಿಯಿಂದ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಅಧಿವೇಶನಕ್ಕೆ ಆಗಮಿಸಲಿರುವ ವೀರಶೈವ ಸಮಾಜದ ಬಂಧುಗಳು ಹೆಸರು ನೋಂದಣಿ ಮಾಡಿಕೊಳ್ಳಬೇಕು. ಎರಡು ದಿನಗಳ ಕಾಲ ವಸತಿ ಮತ್ತು ಊಟದ ವ್ಯವಸ್ಥೆ ಇದ್ದು 500 ರೂ. ಶುಲ್ಕ ಪಾವತಿಸಬೇಕು. ಈ ಹಿಂದೆ ಜಾತಿ ಗಣತಿ ಮಾಡಿರುವುದು ಅವೈಜ್ಞಾನಿಕವಾಗಿದೆ. ಹಾಗಾಗಿ ಸರ್ಕಾರ ಜಾತಿ ಗಣತಿಯನ್ನು ಪ್ರಕಟಿಸಬಾರದು. ನಾವು ಜಾತಿ ಗಣತಿ ವಿರೋಧಿಗಳಲ್ಲ. ಪ್ರತಿ ಮನೆ ಮನೆಗೆ ತೆರಳಿ ಗಣತಿಯನ್ನು ಕ್ರಮಬದ್ಧವಾಗಿ ಮಾಡಿಲ್ಲ. ಹಾಗಾಗಿ, ಮತ್ತೊಮ್ಮೆ ಗಣತಿ ಮಾಡುವಂತೆ ಆಗ್ರಹಿಸಿದರು.
ವೀರಸಿಂಹಾಸನ ವಾಟಾಳು ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ 75ನೇ ವರ್ಷದ ಜನ್ಮದಿನವನ್ನು ಪಟ್ಟಣದ ವಿದ್ಯೋದಯ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಡಿ.24ರಂದು ಆಯೋಜಿಸಲಾಗಿದೆ ಎಂದರು.
ವೀರಶೈವ ಯುವ ಘಟಕದ ತಾಲೂಕು ಅಧ್ಯಕ್ಷ ಬೆನಕನಹಳ್ಳಿ ವಿಜಯಕುಮಾರ್ ಮಾತನಾಡಿ, ದಾವಣಗೆರೆಯಲ್ಲಿ ಎರಡು ದಿನಗಳು ನಡೆಯುವ ಸಮಾವೇಶದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಪರಂಪರೆ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿಗಳಾದ ಪರಶಿವಮೂರ್ತಿ, ಕಿರಗಸೂರು ಮಹದೇವಸ್ವಾಮಿ, ಸದಸ್ಯರಾದ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಕಾವೇರಿಪುರ ಸುರೇಶ್, ಎನ್.ಲೋಕೇಶ್, ಶಿವಕುಮಾರ್, ತಾಪಂ ಮಾಜಿ ಅಧ್ಯಕ್ಷ ಕುಮಾರಸ್ವಾಮಿ, ಪುರಸಭಾ ಸದಸ್ಯ ಎಸ್.ಕೆ.ಕಿರಣ್, ಕೀರ್ತಿ, ಉಮಾಶಂಕರ್, ನಾಗೇಶ್, ಮಲ್ಲಣ್ಣ , ಸತ್ಯಮೂರ್ತಿ, ಮಹದೇವಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್, ನವೀನ್ ಉಪಸ್ಥಿತರಿದ್ದರು.