ಮುಂಬೈ: ಆದಿತ್ಯ ಬಿರ್ಲಾ ಕ್ಯಾಪಿಟಲ್ ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಆದಿತ್ಯ ಬಿರ್ಲಾ ಫೈನಾನ್ಸ್ (ABF) ಜತೆ ವಿಲೀನವನ್ನು ಘೋಷಿಸಿದೆ. ಈ ಘೋಷಣೆಯ ಹಿನ್ನೆಲೆಯಲ್ಲಿ, ವಾರದ ಎರಡನೇ ವಹಿವಾಟಿನ ದಿನವಾದ ಮಂಗಳವಾರದಂದು ಹೂಡಿಕೆದಾರರು ಆದಿತ್ಯ ಬಿರ್ಲಾ ಕ್ಯಾಪಿಟಲ್ ಷೇರುಗಳನ್ನು ಮುಗಿಬಿದ್ದು ಖರೀದಿಸಿದರು. ಇಂಟ್ರಾ ಡೇ ವಹಿವಾಟಿನ ಸಮಯದಲ್ಲಿ ಈ ಷೇರು ಬೆಲೆ 6 ಪ್ರತಿಶತದಷ್ಟು ಏರಿಕೆ ಕಂಡು 190.65 ರೂಪಾಯಿ ತಲುಪಿತ್ತು.
ಕಳೆದ ವರ್ಷ ಜುಲೈ 3 ರಂದು ಷೇರಿನ ಬೆಲೆ 199.40 ರೂ. ಇತ್ತು. ಇದು 52 ವಾರಗಳಲ್ಲಿ ಈ ಷೇರುಗಳ ಗರಿಷ್ಠ ಬೆಲೆಯಾಗಿದೆ. ಕಳೆದ ವರ್ಷ ಮಾರ್ಚ್ 27ರಂದು ಷೇರಿನ ಬೆಲೆ 139.35 ರೂ.ಗೆ ಕುಸಿದಿತ್ತು. ಇದು ಷೇರುಪೇಟೆಯಲ್ಲಿ 52 ವಾರಗಳ ಕನಿಷ್ಠ ಬೆಲೆಯಾಗಿದೆ. ಈ ಸ್ಟಾಕ್ ಬೆಲೆ ಇನ್ನಷ್ಟು ಹೆಚ್ಚಳವಾಗಲಿದೆ ಎಂದು ತಜ್ಞರು ಹೇಳುತ್ತಾರೆ.
ಜೆಎಂ ಫೈನಾನ್ಶಿಯಲ್ ಬ್ರೋಕರೇಜ್ ಸಂಸ್ಥೆಯು ಆದಿತ್ಯ ಬಿರ್ಲಾ ಕ್ಯಾಪಿಟಲ್ ಷೇರುಗಳ ಗುರಿ ಬೆಲೆಯನ್ನು 240 ರೂ.ಗೆ ನಿಗದಿಪಡಿಸಿದೆ. ಆದಿತ್ಯ ಬಿರ್ಲಾ ಕ್ಯಾಪಿಟಲ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಆದಿತ್ಯ ಬಿರ್ಲಾ ಫೈನಾನ್ಸ್ ಲಿಮಿಟೆಡ್‌ನ ನಿರ್ದೇಶಕರ ಮಂಡಳಿಯು ವಿಲೀನದ ಯೋಜನೆಯನ್ನು ಅನುಮೋದಿಸಿದೆ. ಈ ಯೋಜನೆಯು ಷೇರುಗಳ ಬೆಲೆ ಏರಿಕೆಗೆ ಕಾರಣವಾಗಲಿದೆ ಎಂದು ಬ್ರೋಕರೇಜ್ ಸಂಸ್ಥೆ ಹೇಳಿದೆ.
ವಾಸ್ತವವಾಗಿ, ಈ ವಿಲೀನಕ್ಕೆ ಕಾರಣವೆಂದರೆ ದೊಡ್ಡ ಬ್ಯಾಂಕೇತರ ಸಾಲದಾತ ಕಂಪನಿಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಸ್ಕೇಲ್-ಆಧಾರಿತ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಆದಿತ್ಯ ಬಿರ್ಲಾ ಕ್ಯಾಪಿಟಲ್ ಒಂದು ಪಟ್ಟಿ ಮಾಡಲಾದ ವ್ಯವಸ್ಥಿತವಾಗಿ ಪ್ರಮುಖವಾದ ಠೇವಣಿ ರಹಿತ ಕೋರ್ ಇನ್ವೆಸ್ಟ್‌ಮೆಂಟ್ ಕಂಪನಿಯಾಗಿದೆ. ಆದರೆ, ಆದಿತ್ಯ ಬಿರ್ಲಾ ಫೈನಾನ್ಸ್ ವ್ಯವಸ್ಥಿತವಾದ ಪ್ರಮುಖವಾದ NBFC (ನಾನ್-ಬ್ಯಾಂಕ್ ಫೈನಾನ್ಸ್ ಕಂಪನಿ) ಠೇವಣಿ ರಹಿತವಾಗಿದೆ. ವಿಲೀನದ ನಂತರ, ಆದಿತ್ಯ ಬಿರ್ಲಾ ಕ್ಯಾಪಿಟಲ್ ಹೋಲ್ಡಿಂಗ್ ಕಂಪನಿಯಿಂದ 'ಆಪರೇಟಿಂಗ್' NBFC ಆಗಿ ರೂಪಾಂತರಗೊಳ್ಳುತ್ತದೆ. ಇದು ಹೆಚ್ಚಿನ ಆರ್ಥಿಕ ಶಕ್ತಿ ಮತ್ತು ಬಂಡವಾಳದ ನೇರ ಪ್ರವೇಶದೊಂದಿಗೆ ದೊಡ್ಡ ಕಂಪನಿಯಾಗುತ್ತದೆ.