ಬೆಂಗಳೂರು: ನೋಂದಣಿ ಸಮಯದಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ಮತ್ತು ಸರ್ಕಾರದ ಸೌಲಭ್ಯಗಳನ್ನು ರೈತರಿಗೆ ನೇರವಾಗಿ ತಲುಪಿಸುವ ಉದ್ದೇಶದಿಂದ ರಾಜ್ಯದಲ್ಲಿ ಪಹಣಿಗಳಿಗೆ ಆಧಾರ್ ಜೋಡಣೆ ಕಾರ್ಯ ಆರಂಭಿಸಿದೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ನನ್ನ ಆಸ್ತಿ’ ಯೋಜನೆಯಡಿ ‘ನನ್ನ ಆಸ್ತಿ ನನ್ನ ಗುರುತು’ ಎಂಬ ಉದ್ದೇಶದೊಂದಿಗೆ ಪಹಣಿಗೆ ಆಧಾರ್ ಜೋಡಣೆ ಮಾಡುವ ಮಹತ್ವದ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಕೆಲವೆಡೆ ಪೈಲಟ್ ಆಗಿ ಮಾಡಲಾಗಿದೆ. ಇದನ್ನು ಇಂದಿನಿಂದ ರಾಜ್ಯಾದ್ಯಂತ ವಿಸ್ತರಿಸಲಾಗಿದೆ ಎಂದು ಹೇಳಿದರು.
ಈ ಸಂಬಂಧ ನಮ್ಮ ಗ್ರಾಮಾಧಿಕಾರಿಗಳು 19 ಲಕ್ಷ ರೈತರನ್ನು ಸಂಪರ್ಕಿಸಿದ್ದಾರೆ. ಅದರಲ್ಲಿ 6 ಲಕ್ಷ ಪಹಣಿಗಳಿಗೆ ಸಂಬಂಧಿಸಿದಂತೆ ಅದರ ಖಾತೆದಾರರು ಮೃತಪಟ್ಟಿದ್ದಾರೆ. ಹೀಗೆ ಮೃತಪಟ್ಟವರ ಹೆಸರಿನಲ್ಲಿ ಪಹಣಿಗಳು ಇದ್ದರೆ ದುರಪಯೋಗ ಆಗುವ ಸಾಧ್ಯತೆಗಳು ಇರುತ್ತವೆ. ಆಧಾರ್ ಜೋಡಣೆ ಮಾಡುವುದರಿಂದ ಯಾರದ್ದೋ ಆಸ್ತಿ ಮತ್ತಾರೋ ನೋಂದಣಿ ಮಾಡಿಸಿಕೊಳ್ಳುವಂತಹ ಅಕ್ರಮಗಳಿಗೆ ಕಡಿವಾಣ ಹಾಕಬಹದು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಆಸ್ತಿಗಳ ನೋಂದಣಿ ಸಮಯದಲ್ಲಿಯೂ ಸಹ ಆಧಾರ್ ಕಡ್ಡಾಯವಾಗಿ ಕೇಳಲಾಗುತ್ತದೆ. ಆಗ ಆಧಾರ್ ಸಂಖ್ಯೆ ಕೊಡದಿದ್ದರೆ ಅದು ಅನುಮಾನಕ್ಕೆ ಕಾರಣವಾಗಿ ಅದರ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ತದನಂತರ ನೋಂದಣಿ ಮಾಡಿದರೆ ಒಂದಷ್ಟು ಅಕ್ರಮಗಳನ್ನು ತಡೆದಂತಾಗುತ್ತದೆ ಎಂದು ಎಂದರು.
ಗ್ರಾಮಾಧಿಕಾರಿಗಳೇ ಮನೆ ಮನೆಗೆ ತೆರಳಿ ಪಹಣಿ ಮತ್ತು ಆಧಾರ್ ಜೋಡಣೆ ಕಾರ್ಯ ಮಾಡುತ್ತಾರೆ. ಸಾರ್ವಜನಿಕರೂ ಸಹ ತಮ್ಮ ಸಮೀಪದ ಕಂದಾಯ ಕಚೇರಿಗೆ ತೆರಳಿ ಆಧಾರ್ ಜೋಡಣೆ ಮಾಡಿಸಲು ಸಹ ಅವಕಾಶ ನೀಡಲಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.