ದೇವದುರ್ಗ ತಾಲೂಕು ಜಾಲಹಳ್ಳಿ ಗ್ರಾಪಂಯಲ್ಲಿ ಆಯೋಜಿಸಿದ್ದ ಮತಗಟ್ಟೆ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದ ಮತಗಟ್ಟೆ ಅಧಿಕಾರಿಗಳು. 
ನ್ಯೂಸ್

ಯುವ ಮತದಾರನ್ನು ಪಟ್ಟಿಗೆ ಸೇರಿಸಿ

ದೇವದುರ್ಗ: ಮತದಾರರ ಪಟ್ಟಿಯಲ್ಲಿ ಹೊಸ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ತೆಗೆದುಹಾಕುವ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ ಎಂದು ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಸೂಚಿಸಿದರು.

ತಾಲೂಕಿನ ಜಾಲಹಳ್ಳಿ ಗ್ರಾಪಂ ಕಚೇರಿಯಲ್ಲಿ ಆಯೋಜಿಸಿದ್ದ ಮತಗಟ್ಟೆ ಅಧಿಕಾರಿಗಳ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ಅ.29ರಿಂದ ನ.28ವರೆಗೆ ವಿಶೇಷ ಅಭಿಯಾನ ಪ್ರಾರಂಭವಾಗಿದೆ. ಪ್ರತಿಯೊಬ್ಬ ಅಧಿಕಾರಿ ವ್ಯಾಪ್ತಿ ಯುವ ಮತದಾರರ ಹೆಸರು ಕೈ ಬಿಡದೇ ಮತದಾರರ ಪಟ್ಟಿಗೆ ಸೇರಿಸಿಕೊಳ್ಳಬೇಕು.

ಅಲ್ಲದೇ ಬೇರೆ ವಾರ್ಡ್‌ಗಳಿಂದ ಇನ್ನೊಂದು ವಾರ್ಡ್‌ಗೆ ವರ್ಗವಣೆ, ತಿದ್ದುಪಡಿ ಸೇರಿ ವಿವಿಧ ಕೆಲಸ ಕಾರ್ಯಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಕೆಲ ಮತಗಟ್ಟೆ ವ್ಯಾಪ್ತಿಯಲ್ಲಿ ಮೃತಪಟ್ಟವರ ಹೆಸರು ಹಾಗಯೇ ಮುಂದುವರಿದಿವೆ.

ಅಲ್ಲದೆ ಕೆಲವರ ಹೆಸರು ಎರಡೆರಡು ಕಡೆ ಇವೆ. ಇವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಡಿಲೀಟ್ ಮಾಡಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಅತ್ಯಂತ ಜಾಗರುಕತೆಯಿಂದ ಮಾಡಬೇಕು. ನಿಮಗೆ ಯಾವುದೇ ಅನುಮಾನಗಳಿದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದರು. ಉಪತಹಸೀಲ್ದಾರ್ ಗೋವಿಂದ ನಾಯಕ, ಕಂದಾಯ ನಿರೀಕ್ಷಕ ದೇವರಡ್ಡಿ ಗಾಣಧಾಳ ಇದ್ದರು.