ನ್ಯೂಸ್

ತುಮಕೂರು ಗ್ರೇಟರ್ ಬೆಂಗಳೂರಿಗೆ ಸೇರಿಸಿ

ಬೆಂಗಳೂರು: ರಾಜಧಾನಿಗೆ ಸಮೀಪ ಇರುವ ತುಮಕೂರು ಅತೀ ವೇಗವಾಗಿ ಬೆಳೆಯುತ್ತಿದೆ. ಅಭಿವೃದ್ಧಿ ಸಲುವಾಗಿ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಿಸಿಕೊಂಡರೆ ಅನುಕೂಲವಾಗುತ್ತದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತುಮಕೂರು ಉಸ್ತುವಾರಿ ಮತ್ತು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ತುಮಕೂರು ಅತಿ ವೇಗವಾಗಿ ಬೆಳೆಯುತ್ತಿದೆ. 20 ಸಾವಿರ ಎಕರೆಯಲ್ಲಿ ಇಂಡಸ್ಟ್ರೀಯಲ್ ಹಬ್ ಮಾಡಿದ್ದೇವೆ. ಬಹಳ ಜನ ತುಮಕೂರನ್ನು ವಿಸ್ತರಣೆ ಮಾಡಬೇಕೆಂದು ಒತ್ತಾಯವಿದ್ದು, ಅಧ್ಯಯನ ನಡೆಯುತ್ತಿದೆ. ತುಮಕೂರಿನಿಂದ ಬೆಂಗಳೂರಿಗೆ 70 ಕಿ.ಮೀ ಮಾತ್ರ ಅಂತರ. ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಿಸಿಕೊಂಡರೆ ಅಭಿವೃದ್ಧಿ ದೃಷ್ಟಿಯಿಂದ ಅನುಕೂಲವಾಗುತ್ತದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ಮಾಹಿತಿ ನೀಡಿದರು.

ತುಮಕೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಗತ ಕಮಾನು ನಿರ್ಮಿಸಲು ಸ್ಮಾಟ್ ಸಿಟಿ ಯೋಜನೆಯಲ್ಲಿ 5 ಕೋಟಿ ರೂ. ಮೀಸಲಿಡಲಾಗಿದೆ.ರಾಷ್ಟ್ರೀಯ ಹೆದ್ದಾರಿ ಸ್ಥಳೀಯ ನಿರ್ದೇಶಕರು, ಅನುಮತಿ ಬೇಕೆಂದು ಸಲಹೆ ನೀಡಿದ್ದರು. ಆದರಿಂದ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯಖಾತೆ ಸಚಿವ ವಿ.ಸೋಮಣ್ಣಗೆ ಮನವಿ ಮಾಡಿದ್ದೇನೆ. ವಿ.ಸೋಮಣ್ಣ ತುಮಕೂರು ಜಿಲ್ಲಾ ಸಂಸದರು. ಆದರಿಂದ ಅವರ ಮೂಲಕ ಕೇಂದ್ರ ಭೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಮನವಿ ಮಾಡಿ ಅನುಮತಿಯನ್ನು ಕೊಡಿಸುವಂತೆ ಕೇಳಿದ್ದೇನೆ. ಅನುಮತಿ ಸಿಕ್ಕ ಕೂಡಲೇ ಸ್ವಾಗತ ಕಮಾನು ನಿರ್ಮಿಸುತ್ತೇವೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.

ಇದಲ್ಲದೆ, ಜಿಲ್ಲೆಗೆ ಕೇಂದ್ರದ ಅನೇಕ ಯೋಜನೆಗಳು ಆಗಬೇಕಿದೆ. ಕುಡಿಯುವ ನೀರು ಕುರಿತು ಅನೇಕ ಯೋಜನೆಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತವೆ. ಇದರಲ್ಲಿ ನಮ್ಮ ತಾಲೂಕು ಸೇರಿದ್ದು, ಈ ಬಗ್ಗೆಯೂ ಚರ್ಚಿಸಿದ್ದೇನೆ.

ತುಮಕೂರಿಗೆ ಮೆಟ್ರೋ ಯೋಜನೆ ವಿಸ್ತರಣೆ ಮಾಡುವ ಬಗ್ಗೆ ರಾಜ್ಯ ಸರ್ಕಾರದ ತೀರ್ಮಾನಗಳು ಏನಾಗುತ್ತದೆ ಎಂಬುದನ್ನು ನೋಡಬೇಕಿದೆ. ತುಮಕೂರಿಗೆ ಮೆಟ್ರೋ ಅಗತ್ಯ ಇದೆ ಎಂದು ಸೋಮಣ್ಣ ಸಹ ಹೇಳಿದ್ದು, ಸಬ್ ಅರ್ಬನ್ ಯೋಜನೆಯು ಆಗಲಿ. ಎರಡು ಯೋಜನೆಗಳು ಆದರೆ ತಪ್ಪೇನಿಲ್ಲ ಎಂದು ಗೃಹ ಸಚಿವರು ತಿಳಿಸಿದರು.