ಶಿವಮೊಗ್ಗ: ಜೋಗಿ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಜೋಗಿ ಸಮಾಜ ಅಭಿವೃದ್ಧಿ ಮಹಾಮಂಡಳದ ಪ್ರಮುಖರು ಶುಕ್ರವಾರ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜೋಗಿ ಸಮುದಾಯದ ಜನರು ಕಡುಬಡತನದಲ್ಲಿದ್ದು, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ರಂಗದಲ್ಲಿ ಹಿಂದುಳಿದಿದ್ದಾರೆ. ಜೀವನ ನಿರ್ವಹಣೆಗಾಗಿ ಭಿಕ್ಷಾಟನೆ ಮಾಡುತ್ತಿದ್ದಾರೆ. ಡಬ್ಬಗಳನ್ನು ಮಾಡುವುದು, ಹರಿತ ಆಯುಧಗಳಿಗೆ ಸಾಣೆ ಹಿಡಿಯುವುದು ಮುಂತಾದ ಚಿಕ್ಕಪುಟ್ಟ ಕೆಲಸಗಳನ್ನೇ ಕೆಲವರು ಆಶ್ರಯಿಸಿದ್ದಾರೆ. ಮೂಢ ನಂಬಿಕೆ, ಕಂದಾಚಾರಗಳಿಗೆ ಒಳಗಾಗಿ ಅಲೆಮಾರಿಗಳಾಗಿಯೇ ಹೊಟ್ಟೆಪಾಡಿಗಾಗಿ ಸುತ್ತುತ್ತಿದ್ದಾರೆ ಎಂದು ಮನವಿಯಲ್ಲಿ ಬೇಸರ ವ್ಯಕ್ತಪಡಿಸಲಾಗಿದೆ.
12 ವರ್ಷಗಳ ಹಿಂದೆಯೇ ಜೋಗಿ ಸಮಾಜದ ಕುಲಶಾಸ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಜೋಗಿ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ತಕ್ಷಣವೇ ಜೋಗಿ ಜಾತಿಯನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕೆಂದು ಆಗ್ರಹಿಸಿದರು.
ಮಹಾ ಮಂಡಳದ ಅಧ್ಯಕ್ಷ ಶಿವಾಜಿ ಡಿ.ಮಧುರಕರ, ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ, ಪ್ರಮುಖರಾದ ಎಂ.ರವಿ, ವೆಂಕಟೇಶ್, ನಟರಾಜ್, ರವಿ ಕಂಬದಾಳು, ಶಾಂತನಗೌಡ, ರಾಜು ಮುಂತಾದವರಿದ್ದರು.