ಬೆಂಗಳೂರು: ಕನ್ನಡ ಸಿನಿಮಾ ರಂಗದ ನಿರ್ದೆಶಕರಲ್ಲೊಬ್ಬರಾದ ಸಿದ್ಧಲಿಂಗಯ್ಯ ಅವರ ಪತ್ನಿ ಹಿರಿಯ ನಟಿ ಶ್ಯಾಮಲಾದೇವಿ, ತಮ್ಮ ಮಗ ಹಾಗೂ ಸೊಸೆಯ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.
ಮಗ ನಿತಿನ್ ಹಾಗೂ ಸೊಸೆ ಸೇರಿಕೊಂಡು ನಿತ್ಯ ಕಿರುಕುಳಕ್ಕೆ ನೀಡುತ್ತಿದ್ದಾರೆಂದು ಹಿರಿಯ ನಟಿ ಶ್ಯಾಮಲಾ ದೇವಿ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ. ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಮಗ ಹಾಗೂ ಸೊಸೆ ಮೇಲೆ ದೂರು ನೀಡಿದ್ದಾರೆ.
ಈ ಕುರಿತಾಗಿ ಮಾತನಾಡಿದ ನಟಿ, ನನ್ನ ಮಗನ ಮದುವೆಯಾಗಿ 5 ವರ್ಷ ಕಳೆದಿದೆ. ಮದುವೆ ನಂತರ ಸೊಸೆ ಜಗಳ ಮಾಡಿಕೊಳ್ಳುವುದು ಮನೆಯಿಂದ ಆಚೆ ಹೋಗುವುದು ನಡೆಯುತ್ತಿತ್ತು. ಆಕೆಗೆ ಮಗು ಆದ ತಕ್ಷಣ ಮನೆಗೆ ಬಂದು ಜತೆಗೆ ವಾಸಮಾಡುತ್ತಿದ್ದಾಳೆ. ಮಗ-ಸೊಸೆ ಒಂದಾಗಿ ಕೆಟ್ಟಕೆಟ್ಟದಾಗಿ ಬೈಯುತ್ತಾರೆ. ನನ್ನ ಮಗಳು ಹೇಳಿಕೊಟ್ಟು ಮಾಡಿಸುತ್ತಿದ್ದಾಳೆಂದು ಆರೋಪಿಸಿ ಅವಳ ಸಂಸಾರ ಹಾಳು ಮಾಡುತ್ತೇವೆಂದು ಹೇಳುತ್ತಾರೆ ಎಂದಿದ್ದಾರೆ.
ಸೊಸೆ ನನ್ನ ಜತೆ ಜಗಳ ಮಾಡಿ ಹಿಂಸೆಯನ್ನು ಕೊಡೋದು ಮಾಡುತ್ತಿದ್ದಾಳೆ. ಮನೆಯಲ್ಲಿರುವ ವಸ್ತುಗಳನ್ನು ಎಸೆಯುತ್ತಾಳೆ. ಊಟ-ತಿಂಡಿಯನ್ನು ಮಾಡಿಕೊಡುವುದಿಲ್ಲ. ನನ್ನ ಊಟವನ್ನು ನಾನೇ ಮಾಡಿಕೊಂಡರೂ ಹಿಂಸೆ ಕೊಡ್ತಾ ಇದ್ದಾರೆ. ಮನೆಯಿಂದ ಹೊರಗೆ ಹಾಕೋದಕ್ಕಾಗಿಯೇ ಮಗ- ಸೊಸೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳುತ್ತಾ ಶ್ಯಾಮಲಾ ದೇವಿ ಕಣ್ಣೀರು ಹಾಕಿದ್ದಾರೆ.