ಶಿವಮೊಗ್ಗ: ಭಾಜಪದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಅವರ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ನಟಿ ಶ್ರುತಿಯ ಕೆನ್ನೆ ಹಿಂಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ.
ನಗರದಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ಹಮ್ಮಿಕೊಳ್ಳಲಾಗಿದ್ದ ಬೃಹತ್ ಮೆರವಣಿಗೆಯಲ್ಲಿ ಈ ಸನ್ನಿವೇಶ ಕಂಡುಬಂದಿದೆ. ಸಾವಿರಾರು ಜನರು ಜಮಾಯಿಸಿದ್ದ ಈ ಮೆರವಣಿಗೆಯಲ್ಲಿ ನಟಿ ಶ್ರುತಿ ಕೂಡ ಪಾಲ್ಗೊಂಡಿದ್ದು, ಪಕ್ಕದಲ್ಲಿದ್ದ ಬಿಎಸ್ವೈ ಇದೇ ಸಂದರ್ಭದಲ್ಲಿ ಅವರ ಕೆನ್ನೆ ಹಿಂಡಿದ್ದು, ಈ ಫೋಟೋ ಎಲ್ಲೆಡೆ ಹರಿದಾಡಲಾರಂಭಿಸಿದೆ.
ಮೆರವಣಿಗೆಗೆ ಸೇರಿಕೊಂಡ ನಟಿ ಶ್ರುತಿ ಮೊದಲು ಬಿ.ಎಸ್. ಯಡಿಯೂರಪ್ಪ ಅವರಿಗೆ ಕೈಮುಗಿದು ನಮಸ್ಕಾರ ಮಾಡಿದ್ದರು. ನಂತರ ಬಿಎಸ್ವೈ ಅವರ ಆಶೀರ್ವಾದ ಪಡೆಯಲು ತಲೆ ಬಾಗಿಸಿದ್ದರು. ಆಗ ಆಕೆಯ ತಲೆ ನೇವರಿಸಿದ ಯಡಿಯೂರಪ್ಪ, ಕೆನ್ನೆಯನ್ನೂ ಹಿಂಡಿ, ಆತ್ಮೀಯತೆಯಿಂದ ಏನನ್ನೋ ಹೇಳಿದ್ದು ಕಂಡುಬಂತು.
ಇದನ್ನೂ ಓದಿ: ಪತಿಯ ನಿಧನ, ಬಳಿಕ ಗರ್ಭಪಾತವಾಗಿ ಮಗು ಕೂಡ ಸಾವು; ಇನ್ನು ಮಕ್ಕಳಾಗಲ್ಲವೆಂದು ಮಗುವನ್ನು ಕದ್ದ ಮಹಿಳೆಯ ಬಂಧನ
ಇದುವರೆಗೆ ಬಿಎಸ್ವೈ ಸ್ಪರ್ಧಿಸುತ್ತಿದ್ದ ಶಿವಮೊಗ್ಗದ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಸಲ ಅವರ ಪುತ್ರ ಬಿ.ವೈ.ವಿಜಯೇಂದ್ರ ಸ್ಪರ್ಧೆ ಮಾಡಲಿದ್ದು, ಅದ್ಧೂರಿಯಾಗಿ ಬೃಹತ್ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಲಾಯಿತು. ಶಾಸಕ ಪಿ.ರಾಜೀವ್, ನಾರಾಯಣಸ್ವಾಮಿ ಸೇರಿದಂತೆ ಹಲವರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.