ಬೆಂಗಳೂರು: ಭಾರತೀಯ ಉದ್ಯಮ ಕ್ಷೇತ್ರದಲ್ಲಿನ ಸಾಧಕರನ್ನು ಗುರುತಿಸಿ, ಪ್ರಶಸ್ತಿ ಕೊಡಮಾಡಿ ಪ್ರೋತ್ಸಾಹಿಸುವಲ್ಲಿ `ಪ್ರೈಡ್ ಇಂಡಿಯಾ ಅವಾರ್ಡ್’ನಲ್ಲಿ ಶ್ರಿಯಾ ಶರಣ್ ಭಾಗಿಯಾಗಿದ್ದರು. ಇತ್ತೀಚೆಗೆ ಬೆಂಗಳೂರಿನ ಯಶವಂತಪುರ ತಾಜ್‍ನಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿದೆ. ಉದ್ಯಮ ರಂಗದ ದಿಗ್ಗಜರು, ಸಾಧಕರು ನೆರೆದಿದ್ದ ಈ ಕಾರ್ಯಕ್ರಮಕ್ಕೆ ಭಾರತೀಯ ಚಿತ್ರರಂಗದ ಖ್ಯಾತ ನಟಿ ಶ್ರೀಯಾ ಶರಣ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.
ಉದ್ಯಮ ಜಗತ್ತೆಂಬುದು ಸಾಗರವಿದ್ದಂತೆ. ಅದರಲ್ಲಿನ ನಾನಾ ವಿಭಾಗಗಳಲ್ಲಿ ಗೇಮ್ ಚೇಂಜರ್ ಅನ್ನಿಸಿಕೊಂಡು, ಹೊಸತನಗಳ ಮೂಲಕ ಸಾಧನೆ ತೋರಿದ ತೊರೆಗಳೆಲ್ಲ ಯಶವಂತಪುರ ತಾಜ್ ಪ್ರಾಂಗಣದಲ್ಲಿ ಸಂಗಮಿಸಿದಂತಿತ್ತು. ಈ ಸ್ಫೂರ್ತಿದಾಯಕ ಕಾರ್ಯಕ್ರಮದಲ್ಲಿ ಲವಲವಿಕೆಯಿಂದ ಪಾಲ್ಗೊಂಡಿದ್ದ ಶ್ರೀಯಾ ಶರಣ್, ಇದೊಂದು ಅದ್ಭುತ ಕಾರ್ಯಕ್ರಮ ಎಂದು ಹೇಳಿದರು.
ಪ್ರೈಡ್ ಇಂಡಿಯಾ ಅವಾರ್ಡ್ ಎಂಬ ಪರಿಕಲ್ಪನೆ ವಿನಯ್ ಕುಮಾರ್ ನಾರಾಯಣಸ್ವಾಮಿ ಅವರ ಕನಸಿನ ಕೂಸು. ಉದ್ಯಮ ವಲಯದಲ್ಲಿ ಹೊಸ ಸಾಹಸಗಳನ್ನು ಮಾಡಿ ಗೆದ್ದವರು, ನಾನಾ ವಿಭಾಗದಲ್ಲಿದ್ದಾರೆ. ಅಂಥವರನ್ನೆಲ್ಲ ಗುರುತಿಸಿ, ಪ್ರೋತ್ಸಾಹಿಸುತ್ತ, ಭಾರತೀಯ ಉದ್ಯಮ ರಂಗ ಹೊಸ ಸಾಧ್ಯತೆಗಳಿಗೆ ಒಡ್ಡಿಕೊಳ್ಳಲು ಪ್ರೇರೇಪಣೆ ನೀಡುವುದು ಈ ಇವೆಂಟಿನ ಆಶಯ. ಇದೀಗ ಬೆಂಗಳೂರಿನಲ್ಲಿ ಜರುಗಿರುವ ಈ ಕಾರ್ಯಕ್ರಮದಲ್ಲಿ ಉದ್ಯಮ ರಂಗದ ಮುನ್ನೂರಕ್ಕೂ ಹೆಚ್ಚು ಮಂದಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಭಾರತದ ಆರ್ಥಿಕ ಪಥವನ್ನು ಪ್ರಜ್ವಲಿಸುವಂತೆ ಮಾಡುವಲ್ಲಿ ತಮ್ಮದೇ ಸೇವೆ ಸಲ್ಲಿಸುತ್ತಿರುವ ಅನೇಕರನ್ನು ಈ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗುತ್ತದೆ. ಯಶವಂತಪುರ ತಾಜ್ ನಲ್ಲಿ ನಡೆದಿರುವ ಪ್ರೈಡ್ ಇಂಡಿಯಾ ಅವಾರ್ಡ್ ವಿಶೇಷ ಆವೃತ್ತಿಯಲ್ಲಿ ಡಾ. ಸಿದ್ದೇಶ್ವರ್ ಮನೋಜ್, ಡಾ. ಮೀರ್ ಅನ್ವರ್, ಮೊಹಿಯುದ್ದೀನ್, ಸುಧಾಂಶು ಶ್ರೀವಾತ್ಸವ್, ಡಾ. ಭಾಸ್ಕರನ್ ರಾಜು ಅವರಂಥಾ ತೀರ್ಪುಗಾರರ ವಿಶೇಷ ಸಮಿತಿಯನ್ನು ಒಳಗೊಂಡಿತ್ತು.
ಇದೇ ಸಂದರ್ಭದಲ್ಲಿ ಈ ಅವಾರ್ಡ್ ಈವೆಂಟಿನ ಸ್ಥಾಪಕರಾದ ವಿನಯ್ ಕುಮಾರ್ ನಾರಾಯಣಸ್ವಾಮಿ ಮಾತಾಡಿ, 'ಭಾರತೀಯ ಉದ್ಯಮ ರಂಗದಲ್ಲಿ ನಡೆಯುತ್ತಿರುವ ನಾವೀನ್ಯತೆ ಬೆರೆತ ಪ್ರಯತ್ನಗಳಾಗುತ್ತಿರುವುದು ಖುಷಿ ಕೊಡುತ್ತಿದೆ. ಪ್ರೈಡ್ ಇಂಡಿಯಾ ಅವಾರ್ಡ್ ಸಂಸ್ಥೆ ಸದಾ ಕಾಲವೂ ಉದ್ಯಮ ರಂಗದಲ್ಲಿನ ವೈಶಿಷ್ಟ್ಯ ಮತ್ತು ಅಮೋಘ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಧ್ಯೇಯ ಹೊಂದಿದೆ. ಈ ಕಾರ್ಯಕ್ರಮದಿಂದ ಅದಕ್ಕೆ ಮತ್ತಷ್ಟು ಅರ್ಥ ಸಿಕ್ಕಂತಾಗಿದೆ' ಎಂದಿದ್ದಾರೆ.