ಮಾಡೆಲಿಂಗ್ ಲೋಕದಲ್ಲಿ ಮಿಂಚಿ, ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಇಲ್ಲೂ ಸಿನಿಮಾ, ವೆಬ್ಸರಣಿ ಅಂತ ಬಿಜಿಯಾಗಿರುವ ನಟಿ ಶೋಭಿತಾ ಧುಲಿಪಲ. ತೆಲುಗು, ಹಿಂದಿ, ತಮಿಳು, ಮಲಯಾಳಂನಲ್ಲಿ 10ಕ್ಕೂ ಹೆಚ್ಚು ಸಿನಿಮಾ, ನಾಲ್ಕು ವೆಬ್ಸಿರೀಸ್ಗಳಲ್ಲಿ ಮಿಂಚಿರುವ ಅವರು, ಸದ್ಯ ಪ. ರಂಜಿತ್ ಆ್ಯಕ್ಷನ್-ಕಟ್ ಹೇಳುತ್ತಿರುವ "ವೆಟ್ಟುವಂ' ಎಂಬ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದರ ನಡುವೆಯೇ ಇತ್ತೀಚೆಗಷ್ಟೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿಗೆ ಬಂದಿದ್ದರು. ಅದೇ ಸಮಯದಲ್ಲಿ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದ ಅವರು, "ನಾನು ಬೆಂಗಳೂರಿಗೆ ಹೆಚ್ಚು ಬಂದಿಲ್ಲ. ಈ ಬಾರಿ ಇಟಲಿಯ ಕಾರ್ಪಿಸ ಶೋರೂಮ್ ಉದ್ಘಾಟನೆಗೆ ಬಂದಿದ್ದೆ. ಆದರೆ, ಆಗಾಗ ಇಲ್ಲಿಗೆ ಬರಬೇಕು, ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡಬೇಕು ಅಂತ ಆಸೆ ಇದೆ. ಅದರಲ್ಲಂತೂ ಬೆಂಗಳೂರಿನ ವಿವಿಧ ಶೈಲಿಯ ಆಹಾರ, ಖಾದ್ಯಗಳ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ನನಗೂ ಇಲ್ಲಿನ ಫುಡ್ ಇಷ್ಟ. ಇನ್ನು ಕನ್ನಡ ಮತ್ತು ತೆಲುಗು ಭಾಷೆಗಳು ಒಂದಕ್ಕೊಂದು ಹೋಲುತ್ತವೆ. ಹೀಗಾಗಿ ಬೆಂಗಳೂರು ಭಾವನಾತ್ಮಕವಾಗಿಯೂ ಹತ್ತಿರ ಅನ್ನಿಸುತ್ತದೆ. ಹೀಗಾಗಿ ಕರ್ನಾಟಕಕ್ಕೆ ಬಂದಾಗಲೆಲ್ಲ ಮನೆಗೆ ಬಂದಂತೆಯೇ ಅನ್ನಿಸುತ್ತದೆ' ಎಂದು ಸಂತಸ ವ್ಯಕ್ತಪಡಿಸುತ್ತಾರೆ.
ದಶಕದ ಸಂಭ್ರಮ:
ಬಾಲಿವುಡ್ನ "ರಮಣ್ ರಾವ್ 2.0' ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಶೋಭಿತಾ ಧುಲಿಪಲ ಈಗ ದಶಕದ ಸಂಭ್ರಮದಲ್ಲಿದ್ದಾರೆ. "ಚಿತ್ರರಂಗಕ್ಕೆ ಬಂದು 10 ವರ್ಷಗಳಾದವು. ಖುಷಿಯಾಗುತ್ತಿದೆ. ಸದ್ಯ ನಾನು ತಮಿಳು ನಿರ್ದೇಶಕ ಪ.ರಂಜಿತ್ ಅವರ "ವೆಟ್ಟುವಂ' ಎಂಬ ಸಿನಿಮಾ ಮಾಡುತ್ತಿದ್ದೇನೆ. ಅದ್ಭುತವಾಗಿ ಮೂಡಿಬರುತ್ತಿದೆ. ನಾನು ಅದರಲ್ಲಿ ಕ್ರೇಜಿ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಆ್ಯಕ್ಷನ್, ಡಾನ್ಸ್, ವಿಭಿನ್ನ ಕಾಲಘಟ್ಟಗಳು.. ಹೀಗೆ ಆ ಚಿತ್ರದಲ್ಲಿ ಹೊಸ ಪ್ರಪಂಚದ ಅನಾವರಣವಾಗಲಿದೆ. ಹಾಗೇ "ವೆಟ್ಟುವಂ' ನನ್ನ ಇದುವರೆಗಿನ ಬೆಸ್ಟ್ ಸಿನಿಮಾ ಆಗಲಿದೆ ಎಂಬ ಭರವಸೆಯಿದೆ. ಹೀಗಾಗಿ ನಾನಂತೂ ತುಂಬ ಎಕ್ಸೈಟ್ ಆಗಿದ್ದೇನೆ' ಎಂದು ನಿರೀಕ್ಷೆ ವ್ಯಕ್ತಪಡಿಸುತ್ತಾರೆ.
ಇನ್ನೊಬ್ಬರನ್ನು ಮೆಚ್ಚಿಸಬೇಕಿಲ್ಲ...
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಜನರನ್ನು ಸೆಳೆಯಲು, ಮೆಚ್ಚಿಸಲು ನಾನಾ ಸರ್ಕಸ್ ಮಾಡುತ್ತಾರೆ. ಆದರೆ, ಶೋಭಿತಾ ಹಾಗಲ್ಲವಂತೆ. "ನನಗೆ ಏನು ಸರಿ ಅನ್ನಿಸುತ್ತದೋ, ಅದನ್ನೇ ಮಾಡುತ್ತೇನೆ. ಒಮ್ಮೆ ನಿರ್ಧರಿಸಿದರೆ, ಅದನ್ನು ಮತ್ತೆ ಬದಲಿಸುವುದಿಲ್ಲ. ಜನ ಏನಂತಾರೆ? ಯಾರು ಏನು ಮಾತನಾಡಿಕೊಳ್ಳಬಹುದು? ಅಂತ ತಲೆ ಕೆಡಿಸಿಕೊಳ್ಳಲ್ಲ. ಏಕೆಂದರೆ, ಒಮ್ಮೆ ಇನ್ನೊಬ್ಬರನ್ನು ಮೆಚ್ಚಿಸಲು ನಾವು ನಮ್ಮ ನಿರ್ಧಾರ ಬದಲಿಸಿದರೆ, ಅದು ಹಾಗೇ ಮುಂದುವರಿಯುತ್ತದೆ. ಪ್ರತಿ ವಿಷಯದಲ್ಲೂ ಮತ್ತೊಬ್ಬರನ್ನು ಮೆಚ್ಚಿಸುವುದೇ ಕೆಲಸವಾಗಿಬಿಡುತ್ತದೆ. ನಮಗೆ ಏನು ಸರಿ ಅನ್ನಿಸುತ್ತದೋ, ಅದನ್ನೇ ಮಾಡಬೇಕು. ತಪು$್ಪ ನಿರ್ಧಾರವಾಗಿದ್ದರೂ, ಅದಕ್ಕೆ ಬದ್ಧರಾಗಬೇಕು. ಹಾಗೇ ಅದರಿಂದ ಸಮಸ್ಯೆ ಉಂಟಾದರೂ ಎದುರಿಸಲು ಸಿದ್ಧರಿರಬೇಕು' ಎನ್ನುತ್ತಾರೆ ಶೋಭಿತಾ ಧುಲಿಪಲ.