"ಮಾಸ್ಟರ್ಪೀಸ್', "ಅವನೇ ಶ್ರೀಮನ್ನಾರಾಯಣ', "ಕಸ್ತೂರಿ ಮಹಲ್', "ಬ್ಯಾಂಗ್' ಸೇರಿ ತೆಲುಗು ಮತ್ತು ಕನ್ನಡದಲ್ಲಿ 15 ವರ್ಷಗಳ
ಕರಿಯರ್ನಲ್ಲಿ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹೆಗ್ಗಳಿಕೆ ಶಾನ್ವಿ ಶ್ರೀವಾಸ್ತವಗೆ ಸಲ್ಲುತ್ತದೆ. ಇಂತಹ ಶಾನ್ವಿ 2023ರ "ಬ್ಯಾಂಗ್' ಬಳಿಕ ಮತ್ತೆ ಕನ್ನಡದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಮೂರು ವರ್ಷಗಳ ಬಳಿಕ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ "ಅಮೆರಿಕ ಅಮೆರಿಕ 2' ಮೂಲಕ ಮತ್ತೆ ಕಮ್ಬ್ಯಾಕ್ ಮಾಡಿದ್ದಾರೆ. ಇದೇ ಖುಷಿಯಲ್ಲಿ ಇತ್ತೀಚೆಗಷ್ಟೆ ವಿಜಯವಾಣಿ ಜತೆ ಶಾನ್ವಿ ಮಾತಿಗೆ ಸಿಕ್ಕಿದ್ದರು. ಹಿಟ್ ಚಿತ್ರದ ಸೀಕ್ವೆಲ್ ಬಗ್ಗೆ, ""ಅಮೆರಿಕ ಅಮೆರಿಕ 2'ದಲ್ಲಿ ನನ್ನದು ವಿಭಿನ್ನ, ಸವಾಲಿನ ಪಾತ್ರ. ಇದುವರೆಗೂ ಇಂತಹ ಪಾತ್ರದಲ್ಲಿ ನಟಿಸಿಲ್ಲ. ಸಾಮಾನ್ಯವಾಗಿ ಈ ರೀತಿಯ ಪಾತ್ರಗಳು ಕನ್ನಡದಲ್ಲಿ ಬಂದಿರುವುದು ತೀರಾ ಅಪರೂಪ. ನಾನು ಈ ಪಾತ್ರವನ್ನು ಹೇಗೆ ನಿಭಾಯಿಸಬಲ್ಲೆ? ಇದು ಜನರಿಗೆ ಸರಿಯಾಗಿ ಕನೆಕ್ಟ್ ಆಗುತ್ತಾ? ಆಗಲಿಲ್ಲವೆಂದರೆ, ಈ ಪಾತ್ರದ ಬಗ್ಗೆ ಜನರಲ್ಲಿ ಅಸಮಾಧಾನ ಮೂಡುವ ಆತಂಕವಿತ್ತು. ಏಕೆಂದರೆ ಅಷ್ಟು ಸೆನ್ಸಿಟಿವ್ ಪಾತ್ರವಿದು. ಬಹುತೇಕ ಸಿನಿಮಾಗಳಲ್ಲಿ ನನಗೆ ಶೂಟಿಂಗ್ ಪ್ರಾರಂಭಕ್ಕೂ ಮುನ್ನ ಸ್ಕ್ರಿಪ್ಟ್ ಸಿಗುತ್ತಿರಲಿಲ್ಲ. ಆದರೆ, ಶೂಟಿಂಗ್ ಪ್ರಾರಂಭಕ್ಕೂ ಎರಡು, ಮೂರು ತಿಂಗಳು ಮೊದಲೇ ನಾಗತಿಹಳ್ಳಿ ಸರ್ ನನಗೆ ಈ ಚಿತ್ರದ ಸ್ಕ್ರಿಪ್ಟ್ ಕೊಟ್ಟಿದ್ದರು. ಹೀಗಾಗಿ ಸಂಭಾಷಣೆ ಕಲಿಯಲು, ಪಾತ್ರದ ಆಳಕ್ಕೆ ಇಳಿಯಲು ಸಾಧ್ಯವಾಯಿತು. ನನಗೂ ಸರಳವಾಯಿತು. ಸೆಟ್ನಲ್ಲಿ ಕೆಲ ಬಾರಿ ಡೈಲಾಗ್ಸ್ ಬದಲಾದರೂ, ಸಮಸ್ಯೆ ಆಗಲಿಲ್ಲ. ಸ್ವಲ್ಪ ಹೆಚ್ಚು-ಕಡಿಮೆಯಾದರೂ ಪಾತ್ರ ಓವರ್ ಅನ್ನಿಸಿಬಿಡುವ ಆತಂಕವಿತ್ತು. ಹೀಗಾಗಿ ತುಂಬ ಎಚ್ಚರಿಕೆಯಿಂದ ನಿಭಾಯಿಸಬೇಕಿತ್ತು' ಎಂದು ಮಾಹಿತಿ ನೀಡುತ್ತಾರೆ.
ಇಷ್ಟವಾಗಲಿಲ್ಲ, ಒಪ್ಪಲಿಲ್ಲ
"ಬ್ಯಾಂಗ್' ಬಳಿಕ ಮೂರು ವರ್ಷ ಗ್ಯಾಪ್ ಆದ ಬಗ್ಗೆ ಶಾನ್ವಿ, "ಮಧ್ಯಮ ವರ್ಗದ ಹುಡುಗಿಯಾದರೂ ನನಗೆ ಹಣಕ್ಕಾಗಿ ಸಿನಿಮಾ ಮಾಡಲು ಇಷ್ಟವಿಲ್ಲ. ನನಗೆ ಕಥೆ ಇಷ್ಟವಾದರೆ ಮಾತ್ರ ಸೈನ್ ಮಾಡುತ್ತೇನೆ. ಪ್ರತಿ ಚಿತ್ರದಲ್ಲೂ ಏನಾದರೂ ಕಲಿಕೆ ಇರಬೇಕು. "ಬ್ಯಾಂಗ್' ಸಮಯದಲ್ಲಿ ಸಮರಕಲೆ ಕಲಿತೆ. ಶೂಟಿಂಗ್ ಇರದ ವೇಳೆ ಮುಂಬೈನಲ್ಲಿ ನಟನಾ ವರ್ಕ್ಶಾಪ್ ಮಾಡುತ್ತಿರುತ್ತೇನೆ. ಸಿನಿಮಾ ಒಪ್ಪಿದ ಬಳಿಕವೂ ಪಾತ್ರಕ್ಕಾಗಿ ವರ್ಕ್ಶಾಪ್ ಮಾಡುತ್ತೇನೆ. ಅದರಿಂದ ಪಾತ್ರದ ಆಳದವರೆಗೂ ಹೋಗಲು ಸಾಧ್ಯವಾಗುತ್ತದೆ. ನಾನು ಒಂದು ವರ್ಷ, ಐದು ವರ್ಷಕ್ಕೆ ನಟಿಯಾಗಿರಲು ಬಂದವಳಲ್ಲ. ನನ್ನ ಕೊನೆಯವರೆಗೂ ನಟಿಯಾಗಿರಲು ಇಷ್ಟಪಡುವವಳು. ನಾಯಕಿಯಾಗಿ ಶೆಲ್ಫ್ ಲೈಫ್ ಕಡಿಮೆ ಅನ್ನೋದು ಹಿಂದಿತ್ತು. ಈಗಿಲ್ಲ, ಈಗ 50, 60 ವರ್ಷದವರೂ ನಾಯಕಿಯಾಗಿ ನಟಿಸುತ್ತಿದ್ದಾರೆ' ಎನ್ನುತ್ತಾರೆ.
ಕಮರ್ಷಿಯಲ್ ಕಥೆಗಳು ಕಡಿಮೆಯಾಗಿವೆ
ಗ್ಲಾಮರ್ ಪಾತ್ರಗಳಲ್ಲಿ ನಟಿಸಿದ್ದರೂ ಶಾನ್ವಿಗೆ ಇತ್ತೀಚಿನ ದಿನಗಳಲ್ಲಿ ಕಮರ್ಷಿಯಲ್ ಸಿನಿಮಾಗಳಲ್ಲಿ ಅವಕಾಶಗಳು ಬರುತ್ತಿಲ್ಲವಂತೆ. "ಕೆಲ ವರ್ಷಗಳಿಂದೀಚೆಗೆ ಟೊಳ್ಳು ಪಾತ್ರಗಳಿದ್ದ ಕಾರಣ ಕೆಲ ಕಮರ್ಷಿಯಲ್ ಕಥೆಗಳನ್ನು ನಾನು ಒಪ್ಪಿರಲಿಲ್ಲ. ಹೀಗಾಗಿ ನಾನು ಒಪ್ಪಲ್ಲ ಅಂತ ನಿರ್ದೇಶಕರೇ ಅಂದುಕೊಂಡಿರಬಹುದು. ಹೀಗಾಗಿ ಕತೆ ಹೇಳಲು ಬರುತ್ತಿಲ್ಲ. ಗಟ್ಟಿ ಪಾತ್ರಗಳನ್ನೇ ಮಾಡಬೇಕು ಅಂತ ನಾನು ನಿರ್ಧರಿಸಿವರುವುದು ಪ್ಲಸ್ ಜತೆಗೆ ಮೈನಸ್ ಕೂಡ ಆಗಿದೆ. ಹಾಗಂತ ನನಗೆ ನಾಯಕಿಯಾಗೇ ನಟಿಸಬೇಕು ಅಂತಿಲ್ಲ. ಜನರಿಗೆ ಕನೆಕ್ಟ್ ಆಗುವ, ಅಳಿಸುವ, ನಗಿಸುವ ಯಾವುದೇ ಗಟ್ಟಿ ಪಾತ್ರ ಸಿಕ್ಕರೂ, ಬಹುತಾರಾಗಣವಿದ್ದರೂ ನಟಿಸಲು ರೆಡಿ' ಎಂದು ನಗುತ್ತಾರೆ ಶಾನ್ವಿ.
ಮುಂದಿನ ಚಿತ್ರಗಳು
"ಅಮೆರಿಕ ಅಮೆರಿಕ 2' ಚಿತ್ರದಲ್ಲಿ ಶಾನ್ವಿ ನಿರೂಪ್ ಭಂಡಾರಿ ಮತ್ತು ಪೃಥ್ವಿ ಅಂಬಾರ್ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅದರ ಜತೆಗೆ ಮಲಯಾಳಂ ಸಿನಿಮಾ "ಬೆಂಗಳೂರು ಹೈ' ಮತ್ತು ತೆಲುಗಿನಲ್ಲಿ ಆ್ಯಕ್ಷನ್ ಪ್ರಧಾನ ಸೈಫೈ ವೆಬ್ಸರಣಿಯಲ್ಲೂ ಶಾನ್ವಿ ನಟಿಸಿದ್ದು, ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಉಳಿದಂತೆ ಶಾನ್ವಿ ನಾಯಕಿಯಾಗಿ ನಟಿಸಲಿರುವ ಇನ್ನೊಂದು ಕನ್ನಡ ಸಿನಿಮಾ ಆಗಸ್ಟ್ನಿಂದ ಪ್ರಾರಂಭವಾಗಲಿದೆ.