ನ್ಯೂಸ್

ಲೈಂಗಿಕ ಕಿರುಕುಳ ಕೇಸ್​ - ನಟ ದಿಲೀಪ್ ಸಲ್ಲಿಸಿದ ಅರ್ಜಿ ತಿರಸ್ಕರಿಸಿದ ಕೇರಳ ಹೈಕೋರ್ಟ್

ಕೊಚ್ಚಿ: ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ 2017ರ ಕೇಸನ್ನು ಈಗಿನ ವಿಚಾರಣಾ ಕೋರ್ಟ್​​ನಿಂದ ಬೇರೆ ಕೋರ್ಟ್​ಗೆ ಬದಲಾಯಿಸುವಂತೆ ಆರೋಪಿ ನಟ ದಿಲೀಪ್ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ದಿಲೀಪ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ವಿ.ಜಿ.ಅರುಣ್​, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಿ, ಅಪರಾಧಿ ತಪ್ಪಿಸಿಕೊಳ್ಳುವುದಕ್ಕೆ ಅವಕಾಶ ಆಗುತ್ತಿದೆ ಎಂಬುದು ಗಮನಕ್ಕೆ ಬಂದರೆ ಇಂತಹ ಅರ್ಜಿಯನ್ನು ಪುರಸ್ಕರಿಸಬಹುದು. ಆದರೆ ಈಗ ಅಂತಹ ಸನ್ನಿವೇಶವಿಲ್ಲ. ನಿಜಾಂಶ ಹೊರಬಂದು ತಪ್ಪಿತಸ್ಥರಿಗೆ ಶಿಕ್ಷೆ ಆಗುವುದೆಂಬ ಭರವಸೆ ನ್ಯಾಯಾಲಯಕ್ಕೆ ಇದೆ. ಆದ್ದರಿಂದ ಈ ಅರ್ಜಿಯನ್ನು ಪುರಸ್ಕರಿಸಲಾಗದು ಎಂದು ಹೇಳಿದರು.

ಈ ತಿಂಗಳ ಆರಂಭದಲ್ಲೇ ಹೈಕೋರ್ಟ್​ ಈ ಅರ್ಜಿ ಬಂದ ಕೂಡಲೇ ಇನ್ ಕ್ಯಾಮರಾ ವಿಚಾರಣೆ ನಡೆಸುವಂತೆ ಸಿಬಿಐ ವಿಶೇಷ ಕೋರ್ಟ್​ (ಸಿಬಿಐ ವಿಶೇಷ ಕೋರ್ಟ್​ ಜಡ್ಜ್​ 3-ಎರ್ನಾಕುಲಂ)ಗೆ ನಿರ್ದೇಶನ ನೀಡಿತ್ತು. ಈ ನಡುವೆ, ಸಂತ್ರಸ್ತೆ ನಟಿ ಪರ ವಕೀಲರು ತೀರ್ಪಿನ ಮೇಲೆ ಒಂದು ವಾರದ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಮೂರ್ತಿ ತಳ್ಳಿಹಾಕಿದ್ದರು. ಈ ನಡುವೆ, ಈ ಪ್ರಕರಣದ ವಿಚಾರಣೆಯನ್ನು 2021ರ ಫೆಬ್ರವರಿ 4ನೇ ತಾರೀಕಿನೊಳಗೇ ಮುಗಿಸುವಂತೆ ಸುಪ್ರೀಂ ಕೋರ್ಟ್​ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ. (ಏಜೆನ್ಸೀಸ್)