ನ್ಯೂಸ್

'ಆನಂದ್' ಚಿತ್ರದ ನಟಿ ಸೀಮಾ ಡಿಯೊ ನಿಧನ

ಮುಂಬೈ: ಬಾಲಿವುಡ್ ನಟಿ ಸೀಮಾ ಆರ್. ಡಿಯೊ ದೀರ್ಘಕಾಲದ ಅನಾರೋಗ್ಯದ ಸಮಸ್ಯೆಯಿಂದಾಗಿ ಇಲ್ಲಿ ನಿಧನರಾದರು ಎಂದು ಕುಟುಂಬದ ಮೂಲಗಳು ಗುರುವಾರ ತಿಳಿಸಿವೆ. ಸೀಮಾ 1971 ರ ಸೂಪರ್‌ಹಿಟ್ ಚಲನಚಿತ್ರ 'ಆನಂದ್' ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು.

ಸೀಮಾ ಅವರಿಗೆ 81 ವರ್ಷ ವಯಸ್ಸಾಗಿತ್ತು. ಆಲ್ಝೈಮರ್ ಸೇರಿದಂತೆ ಇತರ ಅಸ್ವಸ್ಥತೆಗಳೊಂದಿಗೆ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮುಂಬೈನಲ್ಲಿ ಜನಿಸಿದ ಸೀಮಾ ಡಿಯೊ ಅವರ ಹುಟ್ಟು ಹೆಸರು ನಳಿನಿ ಸರಾಫ್. ಅವರ ಪತಿ ಮತ್ತು ಪ್ರಸಿದ್ಧ ನಟ ರಮೇಶ್ ಡಿಯೊ, ಪುತ್ರರಾದ ನಟ ಅಜಿಂಕ್ಯ ಮತ್ತು ನಿರ್ದೇಶಕ ಅಭಿನಯ್ ಅವರನ್ನು ಅಗಲಿರುವ ಸೀಮಾ ಡಿಯೊ ಆರು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು.

ಸುಮಾರು 90 ಹಿಂದಿ ಮತ್ತು ಮರಾಠಿ ಚಲನಚಿತ್ರಗಳಲ್ಲಿ ನಟಿಸಿರುವ ಸೀಮಾ ಅಮಿತಾಬ್ ಬಚ್ಚನ್ ನಟನೆಯ ಮ್ಯೂಸಿಕಲ್ ಬ್ಲಾಕ್‌ಬಸ್ಟರ್ 'ಆನಂದ್' ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದರಲ್ಲಿ ಅವರ ಪತಿ ರಮೇಶ್ ಸಹ ನಟಿಸಿದ್ದರು. ಸೀಮಾ ನಿಧನಕ್ಕೆ ಬಾಲಿವುಡ್‌ನ ಗಣ್ಯರು ಸಂತಾಪ ಸೂಚಿಸಿದ್ದಾರೆ.