ಮಾ ಇಂಟಿ ಬಂಗಾರಂ ಚಿತ್ರದ ಪೋಸ್ಟರ್
- ಅರುಂಧತಿ ದಾಖಲೆ ಮುರಿದ ಬೆನ್ನಲ್ಲೇ ಮತ್ತೊಂದು ಸಾಧನೆ ಮಾಡಿದ ಸಿನಿಮಾ
- ಟಾಲಿವುಡ್ ನಲ್ಲಿ ಬಾಕ್ಸಾಫೀಸ್ ನಲ್ಲಿ 100 ಕೋಟಿ ಗಳಿಕೆ ಮಾಡಿದ ತೆಲುಗು ಚಿತ್ರ
- ಅತಿಹೆಚ್ಚು ಗಳಿಕೆ ಮಾಡಿದ ಮೊದಲ ಮಹಿಳಾ ಪ್ರಧಾನ ತೆಲುಗು ಸಿನಿಮಾ
ಬಹುಭಾಷಾ ನಟಿ ಸಮಂತಾ ರುಥ್ ಪ್ರಭು ಅಭಿನಯದ ‘ಮಾ ಇಂಟಿ ಬಂಗಾರಂ’ ಚಿತ್ರವು ಟಾಲಿವುಡ್‌ನಲ್ಲಿ ಮೈಲಿಗಲ್ಲು ಸಾಧಿಸುತ್ತಿದೆ. ಕೆಲ ದಿನಗಳ ಹಿಂದಷ್ಟೇ 84 ಕೋಟಿ ಗಳಿಕೆ ಮಾಡುವ ಮೂಲಕ ‘ಅರುಂಧತಿ’ ದಾಖಲೆ ಮುರಿದಿತ್ತು. ಆ ಮೂಲಕ ತೆಲುಗು ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಮಹಿಳಾ ಪ್ರಧಾನ ಸಿನಿಮಾ ಹಿರಿಮೆಗೆ ಪಾತ್ರವಾಗಿತ್ತು. ಅದರ ಬೆನ್ನಲ್ಲೇ ಈ ಸಿನಿಮಾ ಮತ್ತೊಂದು ದಾಖಲೆ ಬರೆದಿದೆ. ‘ಮಾ ಇಂಟಿ ಬಂಗಾರಂ’ ಇದೀಗ 100 ಕೋಟಿ ಗಳಿಕೆ ಮಾಡುವ ಮೂಲಕ ಬಾಕ್ಸಾಫೀಸ್‌ನಲ್ಲಿ ಶತಕ ಬಾರಿಸಿದೆ. ಈ ಸಾಧನೆಯು ಟಾಲಿವುಡ್‌ನಲ್ಲಿ ಇನ್ನಷ್ಟು ಮಹಿಳಾ ಪ್ರಧಾನ ಸಿನಿಮಾ ನಿರ್ಮಾಣಕ್ಕೆ ವೇದಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದೇ ಖುಷಿಯಲ್ಲಿ ಸಮಂತಾ ರುಥ್ ಪ್ರಭು ಸಂತಸ ಹಂಚಿಕೊಂಡಿದ್ದು,‘ಬಿಡುಗಡೆಗೂ ಮುನ್ನ ‘ಮಾ ಇಂಟಿ ಬಂಗಾರಂ’ ಸಿನಿಮಾವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ? ನಾವು ಹಾಕಿದ ಬಂಡವಾಳ ಬರುತ್ತದೆಯೇ ಎಂಬ ಆತಂಕವಿತ್ತು. ಅದಕ್ಕಾಗಿ ನನ್ನ ಸ್ನೇಹಿತರೊಬ್ಬರು ‘ಬಿ’ ಸೆಂಟರ್ ಥಿಯೇಟರ್‌ನವರಿಗೆ ಕರೆ ಮಾಡಿ, ಚಿತ್ರದ ಬಗ್ಗೆ ವಿಚಾರಿಸಿದ. ಆದರೆ, ಆ ಪ್ರದರ್ಶಕ ಮಹಿಳಾ ಪ್ರಧಾನ ಸಿನಿಮಾ ಯಾರು ನೋಡುತ್ತಾರೆ. ಇನ್ನು ಹೀರೋಗಳ ಸಿನಿಮಾಗಳಲ್ಲಿ ಗ್ಲಾಮರ್‌ಗಷ್ಟೇ ಹೀರೋಯಿನ್ ಎಂಬ ಮಾತುಗಳನ್ನಾಡಿದ. ಇಂತಹ ಮಾತುಗಳು ನಮ್ಮ ಆತಂಕ ಹೆಚ್ಚಿಸಿತ್ತು. ಆದರೆ, ಸಮಯ ಹೀಗೆ ಇರುವುದಿಲ್ಲ. ಮನಸ್ಥಿತಿಯಲ್ಲಿ ಬದಲಾವಣೆ ಖಂಡಿತಾ ಆಗುತ್ತದೆ. ಯಾವಾಗ ರಿಸ್ಕ್ ತೆಗೆದುಕೊಳ್ಳುತ್ತೇವೆಯೋ ಆಗ ಬದಲಾವಣೆಯ ಲ ಖಂಡಿತ ಸಿಗುತ್ತದೆ. ನನಗೂ ಕೂಡ ‘ಮಾ ಇಂಟಿ ಬಂಗಾರಂ’ ಮೂಲಕ ಯಶಸ್ಸಿನ ಲ ಸಿಕ್ಕಿದೆ. ಇನ್ಮುಂದೆ ಮಹಿಳಾ ಪ್ರಧಾನ ಸಿನಿಮಾ ಎಂದರೆ ಯಾರೂ ಮೂಗು ಮುರಿಯುವುದಿಲ್ಲ ಎಂದು ನಂಬಿದ್ದೇನೆ’ ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಕಳೆದ ಜೂನ್ 19ರಂದು ರಿಲೀಸ್ ಆಗಿದ್ದ ಈ ಸಿನಿಮಾದಲ್ಲಿ ಸಮಂತಾ ಜತೆಗೆ ದಿಗಂತ್, ಗುಲ್ಶನ್ ದೇವಯ್ಯ ಕಲಾಬಳಗದಲ್ಲಿದ್ದರು. -ಏಜೆನ್ಸೀಸ್