ನ್ಯೂಸ್

ನನಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ! ಬೀದಿ ನಾಯಿಗಳಿಗಾಗಿ ಕಣ್ಣೀರಿಟ್ಟ ನಟಿ ಸದಾ..Actress Sadaa

ಮುಂಬೈ:  ( Actress Sadaa ) ಬೀದಿನಾಯಿಗಳನ್ನು ಸ್ಥಳಾಂತರಿಸುವ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಬಗ್ಗೆ ದೇಶದಾದ್ಯಂತ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಇದೀಗ ನಟಿ ಸದಾ ಅಲಿಯಾಸ್ ಸದಾಫ್ ಕಣ್ಣೀರು ಹಾಕುತ್ತಾ ವಿಡಿಯೋ ಮಾಡಿದ್ದಾರೆ.

ದೆಹಲಿಯಲ್ಲಿ ಹೆಚ್ಚಾದ ನಾಯಿ ದಾಳಿ ಪ್ರಕರಣವನ್ನು ಗಮನಿಸಿ ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದು ಸುಪ್ರೀಂಕೋರ್ಟ್, ಆಗಸ್ಟ್ 11 ರಂದು ಆದೇಶವೊಂದನ್ನು ಪ್ರಕಟಿಸಿದೆ. ದೆಹಲಿ ಸರ್ಕಾರವು, ದೆಹಲಿಯಲ್ಲಿರುವ ಎಲ್ಲ ಬೀದಿನಾಯಿಗಳನ್ನು ಸ್ಥಳಾಂತರಗೊಳಿಸಿ ಅವುಗಳಿಗೆ ನೆಲೆ ಕಲ್ಪಿಸಬೇಕು ಎಂದಿದೆ. ಸಿಎಂ ರೇಖಾ ಗುಪ್ತಾ ಅವರು, ಸುಪ್ರೀಂ ಆದೇಶವನ್ನು ಪಾಲಿಸುವುದಾಗಿ ಹೇಳಿದ್ದಾರೆ. ಚಲನಚಿತ್ರ ತಾರೆಯರು ಸಾಮಾಜಿಕ ಮಾಧ್ಯಮದಲ್ಲಿ ನ್ಯಾಯಾಲಯದ ತೀರ್ಪಿಗೆ ತಮ್ಮ ಆಕ್ಷೇಪಣೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ನಟಿ ಸದಾ ಮಾತನಾಡಿ ‘ಕೇವಲ ಒಂದು ರೆಬೀಸ್​ ಕೇಸಿನಿಂದ ಈ ತೀರ್ಪು ನೀಡಲಾಗಿದೆ. ಅದೂ ಸಹ ರೇಬೀಸ್ ಕೇಸು ಅಲ್ಲ ಎಂದು ಸಾಬೀತಾಗಿ ಬಿಟ್ಟಿದೆ. ಈಗ ಆ ಒಂದು ತೀರ್ಪಿನಿಂದಾಗಿ ಮೂರು ಲಕ್ಷ ನಾಯಿಗಳನ್ನು ಸ್ಥಳಾಂತರಗೊಳಿಸಲಾಗುತ್ತಿದೆ ಅಥವಾ ಕೊಲ್ಲಲಾಗುತ್ತಿದೆ. ಸ್ಥಳಾಂತರಗೊಳಿಸುವುದು ಎಂದರೆ ಕೊಲ್ಲುವುದು ಎಂದೇ ಅರ್ಥ. ಸರ್ಕಾರ ಅಥವಾ ಸ್ಥಳೀಯ ಆಡಳಿತಕ್ಕೆ ಅಷ್ಟು  ನಾಯಿಗಳಿಗೆ ವಾಸಯೋಗ್ಯ ನೆಲೆ ಕಲ್ಪಿಸುವುದು ಸಾಧ್ಯವೇ ಇಲ್ಲ. ಅದರಲ್ಲೂ ಕೇವಲ ಎಂಟು ವಾರಗಳ ಒಳಗೆ ಅಂಥಹದ್ದೊಂದು ನೆಲೆ ಕಲ್ಪಿಸುವುದು ಅಸಾಧ್ಯ. ಹಾಗಾಗಿ ಇದು ನಾಯಿಗಳ ಮಾರಣಹೋಮವೇ ಆಗಲಿದೆ. ಸರ್ಕಾರ, ಸ್ಥಳೀಯ ಆಡಳಿತಗಳಿಗೆ ಇಷ್ಟು ದೊಡ್ಡ ಸಂಖ್ಯೆಯ ನಾಯಿಗಳಿಗೆ ವ್ಯಾಕ್ಸಿನ್ ಹಾಕಲಾಗಿಲ್ಲ, ಸ್ಟೆರಿಲೈಜ್ ಮಾಡಲಾಗಿಲ್ಲ ಎಂದ ಮೇಲೆ ಶೆಲ್ಟರ್ ನಿರ್ಮಿಸಲು ಹೇಗೆ ಸಾಧ್ಯ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

‘ಪ್ರಾಣಿ ಪ್ರಿಯರು ತಮ್ಮ ಹಣ ಖರ್ಚು ಮಾಡಿ ನಾಯಿಗಳಿಗೆ, ಬೆಕ್ಕುಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ವ್ಯಾಕ್ಸಿನೇಷನ್ ಮಾಡಿಸುತ್ತಿದ್ದಾರೆ. ಯಾವುದೂ ಸಹ ಸರ್ಕಾರದ ನೆರವಿನಿಂದ ಆಗುತ್ತಿಲ್ಲ. ನಾನು ಸಹ ಇದನ್ನು ವರ್ಷಗಳಿಂದಲೂ ಮಾಡುತ್ತಿದ್ದೇನೆ. ಇನ್ನು ಜಾತಿ ನಾಯಿಗಳನ್ನು ಸಾಕುವವರು ನಿಜಕ್ಕೂ ಪ್ರಾಣಿ ಪ್ರಿಯರಲ್ಲ. ಅವರು ಪ್ರತಿಬಾರಿ ಒಳ್ಳೆಯ ಬ್ರೀಡ್ ನಾಯಿಯನ್ನು ದತ್ತು ಪಡೆದಾಗಲೆಲ್ಲ ಒಂದು ಬೀದಿ ನಾಯಿ, ಬೆಕ್ಕಿನ ಅವಕಾಶಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಜಾತಿ ನಾಯಿಗಳನ್ನು ದತ್ತು ಪಡೆಯುವವರು ಖಂಡಿತ ಪ್ರಾಣಿ ಪ್ರಿಯರಲ್ಲ. ನಮಗೆ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಶಾಂತಿಯುತ ಪ್ರತಿಭಟನೆ ಮಾಡುವ ಅವಕಾಶವನ್ನು ಪೊಲೀಸರು ನೀಡುತ್ತಿಲ್ಲ. ಭಾರತದಂತಹಾ ದೇಶದಲ್ಲಿ ಜನಿಸಿ, ಈಗ ಮೂಕ ಪ್ರಾಣಿಗಳ ಮಾರಣಹೋಮವನ್ನು ನೋಡಬೇಕಾಗಿ ಬಂದಿದೆ. ನನಗೆ ಏನು ಮಾಡಬೇಕು ಗೊತ್ತಿಲ್ಲ, ಯಾರನ್ನು ಸಂಪರ್ಕಿಸಬೇಕು ಗೊತ್ತಿಲ್ಲ, ಎಲ್ಲಿ ಹೋಗಿ ಧ್ವನಿ ಎತ್ತಬೇಕು ಗೊತ್ತಾಗುತ್ತಿಲ್ಲ ಆದರೆ ಈ ಸುದ್ದಿ ನನ್ನನ್ನು ಒಳಗಿನಿಂದಲೇ ಕೊಲ್ಲುತ್ತಿದೆ’ ಎಂದು ಸದಾ ಕಣ್ಣೀರು ಹಾಕಿದ್ದಾರೆ.

ನಟಿ ಸದಾ ಅಲಿಯಾಸ್ ಸದಾಫ್ ಅವರು ‘ಜಯಂ’ ಕನ್ನಡದ ‘ಮೊನಾಲಿಸಾ’, ‘ಮೈಲಾರಿ’, ‘ಹುಡುಗ ಹುಡುಗಿ’ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿದ್ದಾರೆ. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ನಟನೆಯಿಂದ ಜನರನ್ನು ಆಕರ್ಷಿಸಿದ ಈ ನಟಿ ಈಗ ವನ್ಯಜೀವಿ ಛಾಯಾಗ್ರಾಹಕಿಯಾಗಿದ್ದಾರೆ.