ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಾಯಕನಾಗಿರುವ, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿಬಂದಿರುವ ಸಿನಿಮಾ "ಕೆಡಿ & ದ ಡೆವಿಲ್'. ಈ ಚಿತ್ರದಲ್ಲಿ ಧ್ರುವಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಕಾಣಿಸಿಕೊಂಡಿದ್ದಾರೆ. ಜತೆಗೆ ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಸೇರಿ ಹಲವು ಘಟಾನುಘಟಿ ತಾರೆಯರು ನಟಿಸಿದ್ದಾರೆ. ಸಿನಿಮಾ ಗುರುವಾರ ಬಿಡುಗಡೆಯಾಗಿದ್ದು, ರೀಷ್ಮಾ ನಾಣಯ್ಯ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ಖುಷಿಯಲ್ಲಿ ನಾಯಕಿ ರೀಷ್ಮಾ ನಾಣಯ್ಯ, ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು. "ಪ್ರೇಮ್ ಸರ್ ನನಗೆ ಗುರುಗಳು. "ಏಕ್ಲವ್ಯಾ'ದಲ್ಲಿ ನನಗೆ ಮೊದಲು ಅವಕಾಶ ನೀಡಿದವರು. ರಕ್ಷಿತಾ ಮೇಡಂ ಮೊದಲ ನಿರ್ಮಾಪಕಿ. ಪ್ರತಿ ಹೆಜ್ಜೆಯಲ್ಲೂ ಇಬ್ಬರೂ ನನಗೆ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ. "ಏಕ್ಲವ್ಯಾ'ದಲ್ಲಿ ನನ್ನ ನಟನೆ ನೋಡಿ, "ಕೆಡಿ'ಯ ಮಚ್ ಲಕ್ಷ್ಮೀ ಪಾತ್ರಕ್ಕೆ ರೀಷ್ಮಾ ಸೂಟ್ ಆಗುತ್ತಾಳೆ ಅಂತನ್ನಿಸಿ, ಸರ್ ಲುಕ್ ಟೆಸ್ಟ್ಗೆ ಕರೆದರು. ನಾನು ಮೇಕಪ್, ಕಾಸ್ಟ್ಯೂಮ್ ಧರಿಸಿ ಡೈಲಾಗ್ ಹೇಳಿದೆ. ಅದನ್ನು ನೋಡಿ, ಅವರು ಈಕೆಯೇ ಸರಿ ಅಂತ ಆಯ್ಕೆ ಮಾಡಿಕೊಂಡರು' ಎಂದು ಚಿತ್ರಕ್ಕೆ ಆಯ್ಕೆಯಾದ ಬಗ್ಗೆ ಹೇಳಿಕೊಳ್ಳುತ್ತಾರೆ. ಹಾಗೇ ಪಾತ್ರಕ್ಕೆ ಬೇಕಾದ ಸಿದ್ಧತೆಯ ಕುರಿತು, "ಮಚ್ ಲಕ್ಷ್ಮೀ ಬಜಾರಿ. ಇತ್ತೀಚೆಗೆ ಅಂತಹ ಪಾತ್ರ ಬಂದಿಲ್ಲ. ಪ್ರೇಮ್ ಸರ್ ನನಗೆ ಮಂಜುಳ ಅವರ "ಸಂಪತ್ತಿಗೆ ಸವಾಲ್' ಜತೆಗೆ ಮಾಲಾಶ್ರೀ, ರತಾ ಚಿತ್ರಗಳನ್ನು ನೋಡಲು ಹೇಳಿದರು. ನಾನು ಅವರ ಹಲವು ಚಿತ್ರಗಳನ್ನು ನೋಡಿ, ಕೆಲ ಪಾತ್ರಗಳಿಂದ ಸ್ಪೂರ್ತಿ ಪಡೆದೆ. ಯಾರನ್ನೂ ಕಾಪಿ ಮಾಡದೇ ನನ್ನದೇ ಒಂದು ಸ್ಟೈಲ್ ಮಾಡಿಕೊಂಡೆ. ಶೂಟಿಂಗ್ ವೇಳೆ ಪ್ರಾರಂಭದಲ್ಲಿ ಕಷ್ಟವಾಗುತ್ತಿತ್ತು. ಆದರೆ, ಆಮೇಲೆ ಸರಿಯಾಯಿತು. ಹೆಚ್ಚು ಸಮಯ ತೆಗೆದುಕೊಂಡು, ಕಷ್ಟವಾದರೂ ನಾನೇ ಡಬ್ ಮಾಡಿದೆ. ಟ್ರೇಲರ್ ನೋಡಿದರೆ ರಗಡ್ ಪಾತ್ರದಂತೆ ಕಾಣುತ್ತದೆ. ಆದರೆ, ತುಂಬ ನಗಿಸುವ ಕೆಲಸವನ್ನೂ ಮಚ್ ಲಕ್ಷ್ಮೀ ಮಾಡುತ್ತಾಳೆ' ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ.
ಸಿಂಗಲ್ ಟೇಕ್ ಸಾಹಸ
"ಕೆಡಿ'ಯ ಅತ್ಯಂತ ಸವಾಲಿನ ಸನ್ನಿವೇಶದ ಬಗ್ಗೆ ರೀಷ್ಮಾ, "ಚಿತ್ರದಲ್ಲಿ ಮೂರು ನಿಮಿಷಗಳ ಸಿಂಗಲ್ ಶಾಟ್ ಇತ್ತು. ನನ್ನ ಕರಿಯರ್ನಲ್ಲೇ ನಾನು ಎರಡು, ಮೂರು ನಿಮಿಷಗಳ ಲಾಂಗ್ ಶಾಟ್ ಮಾಡಿಲ್ಲ. ಕ್ಯಾಮರಾ, ಲೈಟಿಂಗ್, ಪ್ರತಿ ಪಾತ್ರವೂ ಎಲ್ಲಿ ನಿಲ್ಲಬೇಕು? ಯಾವಾಗ ಡೈಲಾಗ್ ಡೆಲಿವರಿ ಮಾಡಬೇಕು? ಎಂಬುದನ್ನು ಪ್ಲಾ$್ಯನ್ ಮಾಡಿಕೊಂಡೆವು. ಒಬ್ಬರು ಮಿಸ್ ಮಾಡಿದರೂ ರಿ&ಶೂಟ್ ಮಾಡಬೇಕು. ಹೀಗಾಗಿ ಅರ್ಧ ದಿನ ರಿಹರ್ಸಲ್ ಮಾಡಿ, ನಂತರ ಶೂಟ್ ಮಾಡಿದೆವು. ಅತ್ಯಂತ ಸವಾಲಿನ ಸನ್ನಿವೇಶವಾದ ಕಾರಣ ನಾನೂ ಒತ್ತಡದಲ್ಲಿದ್ದೆ. ಜತೆಗೆ ಪರ್ಫಾರ್ಮ್ ಮಾಡುವಾಗ ಥ್ರಿಲ್ಲಿಂಗ್ ಆಗಿಯೂ ಇತ್ತು' ಎನ್ನುತ್ತಾರೆ. ಹಾಗೇ ಅವರ ನಟನೆ ನೋಡಿ ರಮೇಶ್ ಅರವಿಂದ್, ಸಂಜಯ್ ದತ್ ಮತ್ತು ಶಿಲ್ಪಾ ಶೆಟ್ಟಿಯಂತಹ ದಿಗ್ಗಜ ಕಲಾವಿದರು ಮೆಚ್ಚುಗೆ ವ್ಯಕ್ತಪಡಿಸಿದ್ದನ್ನೂ ಖುಷಿಯಿಂದ ಹೇಳಿಕೊಳ್ಳುತ್ತಾರೆ ರೀಷ್ಮಾ.
ತಪ್ಪಾಯಿತು, ತಿದ್ದಿಕೊಂಡೆವು..
ಇನ್ನು ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ "ಕೆಡಿ' ಚಿತ್ರದ "ಸರ್ಸೆ' ಹಾಡು ದೊಡ್ಡ ಮಟ್ಟದಲ್ಲಿ ವಿವಾದಕ್ಕೀಡಾಗಿತ್ತು. ಆ ಬಗ್ಗೆ ಮೊದಲ ಬಾರಿ ಮಾತನಾಡಿದ ರೀಷ್ಮಾ, "ವಿವಾದ ಪ್ರಾರಂಭವಾದಾಗ ನಾನು ಬ್ಲಾಂಕ್ ಆಗಿಬಿಟ್ಟಿದ್ದೆ. ನನಗೆ ಚಿತ್ರರಂಗವೂ ಹೊಸದು, ಜತೆಗೆ ಇಂತಹ ವಿವಾದ ಇನ್ನೂ ಹೊಸದು. ಹೀಗಾಗಿ ಗೊಂದಲದಲ್ಲಿದ್ದೆ. ಹಾಡನ್ನು ಕೆಟ್ಟದಾಗಿ ಮಾಡಬೇಕು, ಕೆಟ್ಟದಾಗಿ ತೋರಿಸಬೇಕು ಎಂಬುದು ತಂಡದ ಉದ್ದೇಶವಾಗಿರಲಿಲ್ಲ. ಜನರಿಗಾಗಿ ಸಿನಿಮಾ ಮಾಡುತ್ತಿರುವುದು, ಅವರಿಗೆ ಖುಷಿಯಾಗುವಂತೆ ಸಿನಿಮಾ ಮಾಡಬೇಕು. ಅವರಿಗೆ ಬೇಸರವಾಗಿದೆ ಎಂದರೆ ಕ್ಷಮೆ ಕೇಳುವುದರಲ್ಲಿ ತಪ್ಪಿಲ್ಲ. ನಮ್ಮಿಂದ ಯಡವಟ್ಟಾಗಿದೆ ಎಂದ ಮೇಲೆ ಸರಿ ಮಾಡಿಕೊಳ್ಳಬೇಕು. ಪ್ರೇಮ್ ಸರ್ ಕೂಡ ಯಾರ ಮೇಲೂ ಆರೋಪ ಮಾಡದೇ, ಸಾಹಿತ್ಯವನ್ನು ಬದಲಿಸುವುದಾಗಿ ಹೇಳಿದರು. ನಿಮ್ಮ ಕಡೆಯಿಂದ ತಪ್ಪಾಗಿದ್ದರೆ, ಅದನ್ನು ಒಪ್ಪಿಕೊಳ್ಳಲು ಹಿಂಜರಿಯಬೇಡಿ ಎಂಬುದನ್ನು ನಾನೂ ಕಲಿತೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.