"ಏಕ್ಲವ್ಯಾ' ಮೂಲಕ ನಿರ್ದೇಶಕ "ಜೋಗಿ' ಪ್ರೇಮ್ ಅವರಿಂದ ಲಾಂಚ್ ಆದ ನಟಿ ರೀಷ್ಮಾ ನಾಣಯ್ಯ. ನಂತರ "ಬಾನದಾರಿಯಲ್ಲಿ', "ವಾಮನ' ಚಿತ್ರಗಳಲ್ಲಿ ನಟಿಸಿ, ನಂತರ "ಯುಐ', "ಕೆಡಿ' ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಹೊರಟಿದ್ದಾರೆ. ಸದ್ಯ ಕನ್ನಡದಲ್ಲಿ "ಅಣ್ಣ ಫ್ರಮ್ ಮೆಕ್ಸಿಕೋ' ಚಿತ್ರದಲ್ಲಿ ನಟಿಸುತ್ತಿರುವ ಅವರು, ಅದರ ಜತೆಜತೆಗೆ ಕಳೆದ ವರ್ಷ ಕಾಲಿವುಡ್ಗೂ ಹಾರಿದ್ದಾರೆ. "ವರ್ಕರ್' ಎಂಬ ತಮಿಳು ಚಿತ್ರದಲ್ಲಿ, ನಟ ಜೈಗೆ ನಾಯಕಿಯಾಗಿ ನಟಿಸುತ್ತಿದ್ದು, ಸದ್ಯ ಶೂಟಿಂಗ್ ಅಂತಮ ಹಂತದಲ್ಲಿದೆ. ""ಯುಐ'ನಲ್ಲಿ ಹೈಪರ್ ಲವರ್ ಹುಡುಗಿಯಾಗಿ ಮತ್ತು "ಕೆಡಿ'ಯಲ್ಲಿ ರೌಡಿ ಹುಡುಗಿಯ ಪಾತ್ರದಲ್ಲಿ ನಟಿಸಿದ್ದೆ. ನಾನು ಇದುವರೆಗೆ ನಟಿಸಿರುವ ಎಲ್ಲ ಚಿತ್ರಗಳಲ್ಲೂ ಒಂದು ಪಾತ್ರಕ್ಕೂ, ಇನ್ನೊಂದು ಪಾತ್ರಕ್ಕೂ ಸಂಬಂಧವೇ ಇರಲಿಲ್ಲ. ಸಂಪೂರ್ಣವಾಗಿ ಭಿನ್ನ ಪಾತ್ರಗಳಲ್ಲಿ ನಟಿಸಿದ್ದೇನೆ. ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾನು ಚಿತ್ರದ ಸೋಲು & ಗೆಲುವಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ, ಬೇಸರ ಮಾಡಿಕೊಳ್ಳುವುದಿಲ್ಲ. ಜನರಿಗೆ ನನ್ನ ಪಾತ್ರ ಇಷ್ಟವಾಯಿತಾ? ಇಲ್ಲವಾ? ಯಾವ ರೀತಿ ಪಾತ್ರದಲ್ಲಿ ನಟಿಸಿದರೆ ಜನರಿಗೆ ಇಷ್ಟವಾಗುತ್ತದೆ ಅಂತ ಯೋಚಿಸಿ, ಮುಂದಿನ ಚಿತ್ರಗಳತ್ತ ಗಮನ ಹರಿಸುತ್ತೇನೆ. ಮುಂದೆ ನನ್ನ ಆಯ್ಕೆ ಹೇಗಿರಬೇಕು? ಎಂಬುದರ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ. ಸದ್ಯ ಹೊಸ ಕಥೆಗಳನ್ನು ಕೇಳುತ್ತಿದ್ದೇನೆ. ಕಲಾವಿದೆಯಾಗಿ ಬೇರೆ ಚಿತ್ರರಂಗಗಳನ್ನೂ ಎಕ್ಸ್ಪ್ಲೋರ್ ಮಾಡುವ ಆಸೆ ಇದೆ. ಹೀಗಾಗಿ ಬೇರೆ ಭಾಷೆಗಳಲ್ಲೂ ಕಥೆಗಳನ್ನು ಕೇಳುತ್ತಿದ್ದೇನೆ. ಸದ್ಯಕ್ಕೆ ಎಲ್ಲವೂ ಮಾತುಕತೆ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಅಂತಿಮವಾದ ಬಳಿಕ ಚಿತ್ರತಂಡಗಳೇ ಘೋಷಿಸಲಿವೆ' ಎಂದು ಮಾಹಿತಿ ನೀಡುತ್ತಾರೆ.
ಹಾಗೆ ಬಂದು, ಹೀಗೆ ಹೋಗಲ್ಲ:
"ನನಗೆ ಕಥೆಯೇ ಮುಖ್ಯ. ಯಾವಾಗ ಬಂತು, ಯಾವಾಗ ಹೋಯಿತು ಅಂತ ಗೊತ್ತಾಗದ 10 ಸಿನಿಮಾಗಳಿಗಿಂತ 10 ವರ್ಷ ಜನರ ನೆನಪಿನಲ್ಲಿ ಉಳಿಯುವ ಒಂದು ಸಿನಿಮಾ ಮಾಡಬೇಕು' ಎನ್ನುವ ರೀಷ್ಮಾ, ""ಏಕ್ಲವ್ಯಾ' ಪ್ರಚಾರದ ವೇಳೆ ಚಿಕ್ಕ ಮಗುವೊಂದು ಪ್ರೇಮ್ ಸರ್ನ ಜೋಗಿ ಪ್ರೇಮ್ ಸರ್, ಜೋಗಿ ಪ್ರೇಮ್ ಸರ್ ಎಂದು ಕೂಗುತ್ತಿದ್ದ. "ಜೋಗಿ' ಸಿನಿಮಾ ಬಂದು 20ಕ್ಕೂ ಹೆಚ್ಚು ವರ್ಷಗಳಾಗಿವೆ? ಈಗಲೂ ಅದರ ಕ್ರೇಜ್ ಹಾಗೇ ಇದೆ. ಅದು ಒಂದು ದೊಡ್ಡ ಯಶಸ್ಸು. ನನಗೂ ಎಲ್ಲ ಬಗೆ ಪ್ರೇಕ್ಷಕರು, ವಯೋಮಾನದವರಿಗೆ ಕನೆಕ್ಟ್ ಆಗುವಂತಹ ಸಿನಿಮಾ ಮಾಡಬೇಕು, ಹಲವು ವರ್ಷಗಳ ಬಳಿಕವೂ ಜನರು ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಪಾತ್ರ ಮಾಡಬೇಕು ಎಂಬುದು ನನ್ನಾಸೆ. ಸಮಯ ಹೆಚ್ಚು ತೆಗೆದುಕೊಂಡರೂ ಪರವಾಗಿಲ್ಲ, ಒಳ್ಳೆ ಕಥೆಗಳನ್ನೇ ಮಾಡಬೇಕು ಎಂದು ನಿರ್ಧರಿಸಿದ್ದೇನೆ' ಎಂದು ಹೇಳಿಕೊಳ್ಳುತ್ತಾರೆ.
ಮನೆಗೆ ವಾಪಸ್ ಬಂದೇ ಬರುವೆ:
ರೀಷ್ಮಾಗೆ ಕನ್ನಡದ ಜತೆಗೆ ತಮಿಳು, ತೆಲುಗಿನಲ್ಲೂ ಹೆಚ್ಚು ಅವಕಾಶಗಳು ಬರುತ್ತಿವೆಯಂತೆ. "ಆದರೆ, ಆರ್ ಬಂತು ಅಂತ ತಕ್ಷಣ ಆಯ್ಕೆ ಮಾಡಿಕೊಳ್ಳದೇ, ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದೇನೆ. ನನಗೆ ಕ್ವಾಂಟಿಟಿಗಿಂತ ಕ್ವಾಲಿಟಿ ಮುಖ್ಯ. ಬೇರೆ ಯಾವುದೇ ಭಾಷೆಗೆ ಹೋದರೂ, ನನ್ನ ಮೊದಲ ಆದ್ಯತೆ ಕನ್ನಡ. ಎಲ್ಲೇ ಹೋದರೂ ಮನೆಗೆ ವಾಪಸ್ಸಾಗುತ್ತೇನೆ' ಎನ್ನುತ್ತಾರೆ.